
ಕಳೆದ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಎಸಿಪಿ ರಾಮಚಂದ್ರರನ್ನ ವಿವಿಐಪಿ ಸಂಚಾರವನ್ನು ಸುಗಮವಾಗಿ ನಿರ್ವಹಿಸಲು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಮಂಗಳವಾರ ಇದೇ ಮಾರ್ಗದಲ್ಲಿ ಬರ್ತಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ತೀವ್ರ ಅನಾರೋಗ್ಯ ಉಂಟಾಗಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿದ್ರು. ರೂಟ್ ನಂ. 330ರ ಬಸ್ ಚಾಲಕ ರಸ್ತೆ ಪಕ್ಕದಲ್ಲೇ ಬಸ್ ನಿಲ್ಲಿಸಿದ್ರಿಂದ ವಾಹನ ದಟ್ಟಣೆ ಉಂಟಾಗಿತ್ತು.
ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಎಸಿಪಿ ರಾಮಚಂದ್ರ ತಕ್ಷಣವೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ತಡಮಾಡದೆ ಅವರು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಅಸ್ವಸ್ಥ ಚಾಲಕನನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಬಳಿಕ ಸ್ವತಃ ಸ್ಟೇರಿಂಗ್ ಹಿಡಿದು ಬಸ್ ಚಲಾಯಿಸಿ ಬಿಎಂಟಿಸಿ ಬಸ್ ಶೆಲ್ಟರ್‌ನಲ್ಲಿ ನಿಲ್ಲಿಸಿದರು.
ಸಂಚಾರದಟ್ಟಣೆ ತಪ್ಪಿಸುವುದರ ಜೊತೆಗೆ ಚಾಲಕನನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು. ಎಸಿಪಿ ರಾಮಚಂದ್ರ ಅವರು ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.