ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಬಿಸಿಲ ಝಳ, ಕುಡಿಯುವ ನೀರಿನ ಸಂಕಷ್ಟಗಳ ನಡುವೆ ಇದೀಗ ಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಕಾಲರಾ ಸೋಂಕು ಹೆಚ್ಚುತ್ತಿದ್ದು, ಜನರಲ್ಲಿ ಮತ್ತೊಂದು ಆತಂಕವನ್ನು ತಂದೊಡ್ಡಿದೆ.
ಕಲುಷಿತ ನೀರು, ಅನಾರೋಗ್ಯಕರ ಆಹಾರ ಸೇವನೆಯಿಂದಾಗಿ ಕಾಲರ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಶೇ.50ರಷ್ಟು ಕಾಲರ ಪ್ರಕರಣ ಹೆಚ್ಚಾಗಿದೆ.
ನಗರದ ಹಲವರಲ್ಲಿ ವಾಂತಿ-ಭೇದಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಮಲ್ಲೇಶ್ವರಂನಲ್ಲಿ ಒಂದು ಕಾಲರಾ ಪ್ರಕರಣ ದೃಢಪಟ್ತಿತ್ತು. ಇದೇ ವೇಳೆ ಇಬ್ಬರಲ್ಲಿ ಕಲರಾ ರೋಗ ಲಕ್ಷಣ ಕಂಡು ಬಂದಿದ್ದು, ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಮಾರ್ಚ್ ನಲ್ಲಿ 15 ದಿನಗಳಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದವು.
ಇದೀಗ ದಿನಕ್ಕೆ ಕನಿಷ್ಠ 20 ಪ್ರಕರಣಗಳು ವರದಿಯಾಗುತ್ತಿದ್ದು, ಕಳಪೆ ಆಹಾರ, ಕಲುಷಿತ ನೀರು ಸೇವನೆ, ನೀರಿನ ಬಿಕ್ಕಟ್ಟು ಪ್ರಮುಖ ಕಾರಣ ಎನ್ನಲಾಗಿದೆ. ಮಲ್ಲೇಶ್ವರಂ ಪ್ರದೇಶದ ಕಾಲರಾ ಸೋಂಕು ದೃಧಪಟ್ಟಿದ್ದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕುಡ ಸ್ಪಷ್ಟಪಡಿಸಿದ್ದಾರೆ.
ಕಾಲರಾ ವಿಷಕಾರಿ ಬ್ಯಾಕ್ಟೀರಿಯಾ ವಿಬ್ರಿಯೊ ಕಲಾರಾದಿಂದ ಹರಡುವ ಸೋಂಕು. ಈ ಬ್ಯಾಕ್ಟೀರಿಯಾದಿಂದ ಕರುಳಿನ ಸೋಂಕು ಹೆಚ್ಚಾಗುತ್ತದೆ. ಪರಿಣಾಮ ವ್ಯಕ್ತಿ ವಾಂತಿ-ಭೇದಿಯಿಂದ ಬಳಲುತ್ತಾನೆ.
ರಸ್ತೆಬದಿಯ ಆಹಾರ ಸೇವನೆ ಬಗ್ಗೆ ಎಚ್ಚರವಹಿಸಬೇಕು. ಶುಚಿಯಾದ ಆಹಾರ, ಶುದ್ಧ ಕುಡಿಯುವ ನೀರು, ದೆಹದಲ್ಲಿ ನೀರಿನ ಮಟ್ಟ ಕಡಿಮೆಯಾಗದಂತೆ ನೋಡಿಕೊಳ್ಳುವಂತೆ ಹಾಗೂ ಕುದಿಸಿ ಆರಿಸಿದ ನೀರು ಸೇವನೆ ಮಾಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.