ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಬಿಸಿಲಝಳ, ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ. ಈ ನಡುವೆ ಕಾಲರಾ ಸೋಂಕಿನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಲರಾ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಜಲಮಂಡಳಿಗೆ ಪತ್ರ ಬರೆದಿದೆ.
ಕಾಲರಾಗೆ ಕಡಿವಾಣ ಹಾಕಲು ಅಲರ್ಟ್ ಆಗಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್, ಜಲಮಂಡಳಿಗೆ ಪತ್ರ ಬರೆದಿದ್ದಾರೆ. ಜಲಮೂಲಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ನೀರಿನ ಶುದ್ಧೀಕರಣ ಘಟಕ ಹಾಗೂ ನೀರಿನ ಗುಣಮಟ್ಟ ನಿಯಮಾನುಸಾರವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳು ವರದಿಯಾದ ಪ್ರದೇಶಗಳಲ್ಲಿ ಮ್ಯಾನ್ ಹೋಲ್ ಗಳು ಹಾಗೂ ಕೊಳವೆ ನೀರಿನಿಂದ ಮಾದರಿಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳುಗೆ ಅಗತ್ಯ ಸಹಕಾರ ನೀಡಬೇಕು.
ಯಾವುದಾದರೂ ಕೊಳವೆ ಸೋರಿಕೆ ಇದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.