ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿತ್ರಕಲಾ ಪರಿಷತ್ ವತಿಯಿಂದ ಚಿತ್ರಸಂತೆ ಆಯೋಜಿಸಲಾಗಿದೆ. ಚಿತ್ರಸಂತೆಗೆ ಬರುವವರಿಗಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 21ನೇ ಚಿತ್ರಸಂತೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಲಾಪ್ರದರ್ಶನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಚಿತ್ರಸಂತೆ ವೀಕ್ಷಿಸಲು ಲಕ್ಷಾಂತರ ಜನರು ಬರುವ ನಿರೀಕ್ಷೆ ಇದೆ. ಭಾನುವಾರ ರಜಾದಿನವಿರುವುದರಿಂದ ಚಿತ್ರಸಂತೆಗೆ ಜನರು ಹರಿದುಬರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯಿಂದ ಮೆಟ್ರೋ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಈ ಬಸ್ ಸಂಚರಿಸಲಿದ್ದು, 15 ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಆನಂದ್ ರಾವ್ ಸರ್ಕಲ್, ಶಿವಾನಂದ ಸ್ಟೋರ್ಸ್ ಮಾರ್ಗವಾಗಿ ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಪ್ರತಿ 10 ನಿಮಿಷಕ್ಕೊಂದರಂತೆ 4 ಬಸ್ ಹಾಗೂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ, ಶಿವಾನಂದ ಸ್ಟೋರ್ಸ್ ಮುಖೇನ 4 ಬಸ್ ಗಳು ಸಂಚರಿಸಲಿವೆ.
22 ರಾಜ್ಯಗಳಿಂದ ಕಲಾವಿದರು ಆಗಮಿಸಿದ್ದು, ಶಿವಾನಂದ ಸರ್ಕಲ್ ನಿಂದ ಸ್ಟೀಲ್ ಬ್ರಿಡ್ಜ್ ಕೆಳಗಿನವರೆಗೆ ಚಿತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಲಾವಿದರು ನೇರವಾಗಿ ತಮ್ಮ ಚಿತ್ರಕಲೆಗಳನ್ನು ಮಾರಾಟ ಮಾಡಲಿದ್ದಾರೆ.