ಪುಟ್ಟ ಮಕ್ಕಳಿಗೆ ಅಪಾಯಕಾರಿ ವಸ್ತುಗಳನ್ನು ಕೊಡುವುದು ಜೀವಕ್ಕೇ ಕುತ್ತು ತರುತ್ತದೆ. ಅದೇ ರೀತಿ ಚಿಕ್ಕ ಮಕ್ಕಳಿಗೆ ವಾಹನಗಳನ್ನ ಕೊಡುವುದು ಅಪರಾಧವೇ. ಪುಟ್ಟ ಮಗುವೊಂದು ಕಾರ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಮಗುವೊಂದು ಮಹೀಂದ್ರಾ ಥಾರ್ನ ಸ್ಟೇರಿಂಗ್ ಹಿಡಿದು ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಟ್ವಿಟರ್ ನಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಮಗು ವ್ಯಕ್ತಿಯ ಮಡಿಲಲ್ಲಿ ಕುಳಿತು ಎಸ್ಯುವಿ ಚಾಲನೆ ಮಾಡುತ್ತಿದೆ ಎಂದು ಹೇಳಲಾಗಿದೆ. ಎಂಜಿ ರೋಡ್ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಎಂದು ಪತ್ರಕರ್ತರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.
ವೀಡಿಯೋದೊಂದಿಗೆ ವಾಹನದ ಸಂಖ್ಯೆಯನ್ನು ಹಂಚಿಕೊಂಡಿದ್ದು ಸಂಚಾರಿ ಪೊಲೀಸರು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ಕ್ಲಿಪ್ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ವಾಹನವನ್ನು ಗುರ್ತಿಸಿ ಪೊಲೀಸರು ದಂಡ ವಿಧಿಸಿದ್ದಾರೆ. ಈ ಮಧ್ಯೆ ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು ಇತಹ ಕೃತ್ಯಕ್ಕೆ ಕಾರಣವಾದ ವ್ಯಕ್ತಿಯನ್ನು ಜೈಲಿಗೆ ಹಾಕಬೇಕೆಂದು ಸಿಟ್ಟು ತೋರಿಸಿದ್ದಾರೆ.