ಬೆಂಗಳೂರು: ನಿಮ್ಮ ಮಕ್ಕಳು ಯಾವಾಗಲೂ ಇಂತದ್ದೊಂದು ಚಾಕೋಲೇಟ್ ಗಳನ್ನು ಪದೇ ಪದೇ ಸೇವಿಸುತ್ತಿದ್ದರೆ ಕೊಂಚ ಎಚ್ಚರವಾಗಿರುವುದು ಅಗತ್ಯ…. ಬೆಂಗಳೂರಿನಲ್ಲಿ ಚರಸ್ ಮಿಶ್ರಿತ ಚಾಕೋಲೇಟ್ ಮಾರಾಟ ಮಾಡುವ ಗ್ಯಾಂಗ್ ವೊಂದು ಪತ್ತೆಯಾಗಿದೆ. ಶಾಲಾ-ಕಾಲೇಜುಗಳ ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಇಂತಹ ಚಾಕೋಲೇಟ್ ಗಳನ್ನು ಇಟ್ಟು ಮಾರಾಟ ಮಡಲಾಗುತ್ತಿರುವ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಚರಸ್ ಮಿಶ್ರಿತ ಚಾಕೋಲೇಟ್ ಮಾರಾಟ ಮಾಡುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂಕೂರ್, ಸೂರಜ್, ಸೋನು ಸಿಂಗ್, ಆನಂದ್ ಕುಮಾರ್, ಜೀತೂ ಸಿಂಗ್ ಸೇರಿ 6 ಜನರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಮೂಲದ ಪೆಡ್ಲರ್ ಓರ್ವನಿಂದ ಇವರಿಗೆ ಚರಸ್ ಮಿಶ್ರಿತ ಚಾಕೋಲೇಟ್ ಪೂರೈಕೆಯಾಗುತ್ತಿತ್ತು. ಇವರು ನಗರದ ವಿವಿಧ ಪಾನ್ ಶಾಪ್ ಗಳಲ್ಲಿ ಇವುಗಳನ್ನು ಇಟ್ಟು ಮಾರಾಟಮಾಡುತ್ತಿದ್ದರು.
ಪ್ರಮುಖವಾಗಿ ಶಾಲಾ-ಕಾಲೇಜು ಬಳಿ ಇರುವ ಅಂಗಡಿಗಳು, ಇಂಡಸ್ಟ್ರಿಯಲ್ ಏರಿಯಾಗಳಲ್ಲಿರುವ ಪಾನ್ ಶಾಪ್, ಪ್ರತಿಷ್ಠಿತ ಕಾಲೇಜುಗಳ ಸುತ್ತಮುತ್ತ ಇರುವ ಅಂಗಡಿಗಳು, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಆನೇಕಲ್, ಅತ್ತಿಬೆಲೆ, ಹೊರಮಾವು, ಬನ್ನೇರುಘಟ್ಟ, ಬೊಮ್ಮಸಂದ್ರ, ಕೋರಮಂಗಲ, ಬಿಟಿಎಂ ಲೇಔಟ್ ಸೇರಿದಂತೆ ವಿವಿಧೆಡೆಗಳಲ್ಲಿ ಇಂತಹ ಚರಸ್ ಮಿಶ್ರಿತ ಚಾಕೋಲೇಟ್ ಗಳನ್ನು ಮಾರಾಟ ಮಡಲಾಗುತ್ತಿತ್ತು. ಸದ್ಯ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 50 ಕೆಜಿ ಚಾಕೋಲೇಟ್ ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರೆದಿದೆ.