ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಒಂದೆಡೆ ರಾಜಕೀಯ ಪಕ್ಷಗಳ ನಾಯಕ ಅಬ್ಬರದ ಪ್ರಚಾರ, ಇನ್ನೊಂದೆಡೆ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಮತ್ತೊಂದೆಡೆ ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಹಾಗೂ ಚುನಾವಣಾ ಆಧಿಕಾರಿಗಳು ದಾಖಲೆಗಳಿಲ್ಲದ ಕೋಟಿ ಕೋಟಿ ಹಣ ಸೀಜ್ ಮಾಡುತ್ತಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ದಾಖಲೆ ಇಲ್ಲದ 1 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಜಯನಗರದ 4ನೇ ಬ್ಲಾಕ್ ನ ಮಯಾಸ್ ಹೋಟೆಲ್ ಎದುರು ನಿಂತಿದ್ದ ಕೆಂಪು ಬಣ್ಣದ ಕಾರಿನಲ್ಲಿ ಚೀಲ ಹಾಗೂ ಬ್ಯಾಗ್ ಗಳು ಪತ್ತೆಯಾಗಿತ್ತು.
ಹಣದ ಬಗ್ಗೆ ಅನುಮಾನಗೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನ ಗಾಜು ಒಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ದಾಖಲೆಗಳಿಲ್ಲದ 1 ಕೋಟಿ ಹಣ ಪತ್ತೆಯಾಗಿದೆ. ಅಲ್ಲದೇ ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ ಸುಜುಕಿ ಆಕ್ಸಸ್ ಬೈಕ್ ನಲ್ಲಿ ಇದ್ದ ಬ್ಯಾಗ್ ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ.
ಕಾರು ಹಾಗೂ ಬೈಕ್ ಹಾಗೂ ನಗದು ಹಣವನ್ನು ವಶಕ್ಕೆ ಪಡೆದ ಪೊಲೀಸರು, ಜಯನಗರ ಠಾಣೆಗೆ ತಂದು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.