
ಬುಧವಾರದಂದು ಔಟರ್ ರಿಂಗ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಆದ ಕಾರಣ ಇದರಲ್ಲಿ ಸಿಲುಕಿಕೊಂಡವರು ಗಂಟೆಗಟ್ಟಲೆ ಕಾಯುವಂತಾಗಿತ್ತು. ಈ ಸಂದರ್ಭವನ್ನು ಸದುಪಯೋಗಿಸಿಕೊಂಡ ಕ್ಯಾಬ್ ಚಾಲಕರೊಬ್ಬರು ವಾಹನದಲ್ಲಿಯೇ ಕುಳಿತು ಊಟ ಮಾಡಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನ ಸಿಟಿಜನ್ ಮೊಮೆಂಟ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಸಮಸ್ಯೆಯಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಅಧಿಕಾರಕ್ಕೆ ತೊಂದರೆಯಾಗುವುದಿಲ್ಲ ಎಂದು ವ್ಯಂಗ್ಯವಾಡಲಾಗಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಲೇ ಹಲವು ಬಳಕೆದಾರರು ತಮ್ಮ ತಮ್ಮ ಅನುಭವವನ್ನು ಬರೆದುಕೊಂಡಿದ್ದು, ಈ ಸಮಸ್ಯೆಯಿಂದ ಪಾರಾಗಬೇಕೆಂದರೆ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಕಟ್ಟುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಐಟಿ ಹಬ್ ಗಳನ್ನು ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಿಗೆ ವಿಸ್ತರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಈ ವಿಡಿಯೋಗೆ ಪ್ರತಿಕ್ರಿಯಿಸಿ ಸಂಚಾರ ದಟ್ಟಣೆ ಮಾತ್ರವಲ್ಲ, ರಸ್ತೆ ಮೇಲಿನ ಗುಂಡಿಗಳು ಸಹ ವಾಹನ ಸವಾರರಿಗೆ ದುಸ್ವಪ್ನವಾಗಿವೆ. ಸೊಂಟ ಮುರಿದುಕೊಳ್ಳದೆ ಸುರಕ್ಷಿತವಾಗಿ ಮನೆ ಸೇರಿಕೊಂಡರೆ ಸಾಕು ಎಂಬಂತಾಗಿದೆ ಎಂದಿದ್ದಾರೆ.