ಬೆಂಗಳೂರು ಮೂಲದ ಉದ್ಯಮಿಯ ಪತ್ನಿ ಮತ್ತು ಅವರ 11 ವರ್ಷದ ಮಗ ತಮ್ಮ ಭೌತಿಕ ಜೀವನವನ್ನು ತ್ಯಜಿಸಿ ಗುಜರಾತ್ ನ ಸೂರತ್ ನಲ್ಲಿ ಜೈನ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದಾರೆ. 11 ವರ್ಷದ ಹೃಧನ್ ಈ ವರ್ಷದ ಜನವರಿಯಲ್ಲಿ ಸೂರತ್‌ನಲ್ಲಿ ತನ್ನ ತಾಯಿ 30 ವರ್ಷದ ಸ್ವೀಟಿಯೊಂದಿಗೆ ಸನ್ಯಾಸತ್ವವನ್ನು ಸ್ವೀಕರಿಸಿರುವ ಕುರಿತು ವರದಿಯಾಗಿದೆ.
ಮಹಿಳೆಯನ್ನು ಬೆಂಗಳೂರು ಮೂಲದ ಉದ್ಯಮಿ ಮನೀಶ್ ಅವರ ಪತ್ನಿ ಸ್ವೀಟಿ ಎಂದು ಗುರುತಿಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಸ್ವೀಟಿ ಗರ್ಭಿಣಿಯಾಗಿದ್ದಾಗಲೇ ಸನ್ಯಾಸಿಯ ಜೀವನವನ್ನು ನಡೆಸಲು ನಿರ್ಧರಿಸಿದ್ದರು. ಪುತ್ರ ಜನಿಸಿದ ನಂತರ ಆಕೆ ಜೈನ ಸಂತರ ಜೀವನವನ್ನು ಒಪ್ಪಿಕೊಳ್ಳುವ ಉದ್ದೇಶದಿಂದ ತನ್ನ ಮಗನಿಗೆ ಸನ್ಯಾಸತ್ವದ ಮೂಲಭೂತ ಅಂಶಗಳನ್ನು ಕಲಿಸಿದ್ದರು ಎನ್ನಲಾಗಿದೆ.
ಜೈನ ಧರ್ಮದ ಪ್ರಕಾರ ಸನ್ಯಾಸತ್ವ ಸ್ವೀಕರಿಸಲು ತಾಯಿ ಮತ್ತು ಮಗ ದೀಕ್ಷೆ ತೆಗೆದುಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಮೂಲ ಗುರುತನ್ನು ತ್ಯಜಿಸಿದ್ದು, ಸ್ವೀಟಿಗೆ ಭಾವಶುಧಿ ರೇಖಾ ಶ್ರೀ ಜಿ ಎಂದು ಹೆಸರಿಟ್ಟರೆ, ಆಕೆಯ ಮಗನಿಗೆ ಹಿತಶಯ್ ರತನವಿಜಯ್ ಜಿ ಎಂದು ಹೆಸರಿಸಲಾಯಿತು.
‘ದೀಕ್ಷೆ’ ಜೈನ ಧರ್ಮದ ಆಚರಣೆಯ ಭಾಗವಾಗಿದ್ದು, ಇದರಲ್ಲಿ ವ್ಯಕ್ತಿಯು ಸನ್ಯಾಸತ್ವ ಸ್ವೀಕರಿಸುವ ಮೊದಲು, ಔಪಚಾರಿಕವಾಗಿ ಜೈನ ಸಂಸ್ಕೃತಿಯ ಅಡಿಯಲ್ಲಿ ಬೋಧಿಸಲಾದ ಶಿಸ್ತುಗಳು ಮತ್ತು ಆಧ್ಯಾತ್ಮಿಕ ಬೋಧನೆಗಳಿಗೆ ಬದ್ಧನಾಗಿರುತ್ತಾರೆ.