ಬೆಂಗಳೂರು: ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿಯಲ್ಲಿ ಮತ್ತೆ ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಸಂಭವಿಸಿತ್ತು. ಇದೀಗ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮತ್ತಿಬ್ಬರು ಶವ ಪತ್ತೆಯಾಗಿದ್ದು, ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನೂ ಮೂವರು ಸಿಲುಕಿರುವ ಶಂಕೆ ಇದೆ.
ಕಟ್ಟಡ ಕುಸಿತ ದುರಂತದಲ್ಲಿ 13 ಜನರನ್ನು ರಕ್ಷಿಸಲಾಗಿದೆ. ಕಟ್ಟಡ ಮಾಲೀಕ ಭುವನ್ ರೆಡ್ಡಿ 4 ಅಂತಸ್ತಿನವರೆಗೆ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿದ್ದರು. ಆದರೆ 6 ಅಂತಸ್ತಗಳನ್ನು ನಿರ್ಮಿಸಲಾಗಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಕಟ್ಟಡ ಕುಸಿದಿದ್ದು, ಸದ್ಯ ಕಟ್ಟಡದ ಮಾಲೀಕ ಭುವನ್ ರೆಡ್ಡಿ ಹಾಗೂ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ.