ಸಾಮಾಜಿಕ ಜಾಲತಾಣದಲ್ಲಿ ಹೆಸರು ಪಡೆಯಲು ಬೆಂಗಳೂರಲ್ಲಿ ಹಾಡಹಗಲೇ ಯುವಕರ ಗುಂಪೊಂದು ರಸ್ತೆಯಲ್ಲಿ ರ್ಯಾಲಿ ಹೋಗುತ್ತಾ ಸಂಚಾರಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿಬಂದಿದೆ.
ಅಂತಹ ಯಾವುದೇ ರ್ಯಾಲಿಗೆ ಪೊಲೀಸರ ಅನುಮತಿ ಇಲ್ಲದಿದ್ದರಿಂದ ಯುವಕರೇ ನಾಲ್ಕೈದು ವಾಹನಗಳಲ್ಲಿ ಒಂದೇ ಬಾರಿ ರಸ್ತೆಗಿಳಿದಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ “ಹಲೋ @BlrCityPolice? ಬ್ಯುಸಿ ರೋಡ್‌ನಲ್ಲಿ ಈ ಸರ್ಕಸ್ ಮಾಡಲು ಯೂಟ್ಯೂಬರ್ ವಿಶೇಷ ಹಕ್ಕನ್ನು ಹೇಗೆ ಪಡೆಯುತ್ತಾನೆ? ದಯವಿಟ್ಟು ಕ್ರಮ ಕೈಗೊಳ್ಳಲು @CPBlr ಗೆ ವಿನಂತಿಸುತ್ತಿದ್ದೇನೆ.” ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿ ಟ್ಯಾಗ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಯುವಕರ ಗುಂಪು ಕಪ್ಪು ಬಣ್ಣದ ಜಿಪ್ಸಿಯಲ್ಲಿ ನಿಂತಿದ್ದು, ಅವರನ್ನು 4 ರಿಂದ 5 ವಾಹನಗಳು ಹಿಂಬಾಲಿಸಿವೆ. ಈ ವೇಳೆ ವಾಹನ ದಟ್ಟಣೆ ಉಂಟಾಗಿ ಈ ಅವ್ಯವಸ್ಥೆಯನ್ನು ರೆಕಾರ್ಡ್ ಮಾಡಲು ರಸ್ತೆಯಲ್ಲಿದ್ದ ವಾಹನ ಸವಾರರು ಮುಂದಾದರು. ಅವರತ್ತ ವಾಹನದಲ್ಲಿದ್ದ ಯುವಕರು ಕೈಬೀಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಜೊತೆಗೆ ರಸ್ತೆಯನ್ನು ತಡೆದು ಜಿಪ್ಸಿಯಲ್ಲಿದ್ದ ಯುವಕರು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದರಿಂದ ರಸ್ತೆಯಲ್ಲಿದ್ದ ಇತರ ವಾಹನಗಳು ಮುಂದೆ ಹೋಗಲು ಸಾಧ್ಯವಾಗಲಿಲ್ಲ.
ಹೊಸಕೋಟೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಾಹನಗಳನ್ನು ಪತ್ತೆ ಮಾಡಿದ್ದಾರೆ. “ವಾಹನಗಳನ್ನು ಪತ್ತೆಹಚ್ಚಲಾಗಿದೆ ಮತ್ತು ವಾಹನ ಸವಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಇಂಟರ್ನೆಟ್ ಬಳಕೆದಾರರು ಬೇಜವಾಬ್ದಾರಿ ಮತ್ತು ಇತರ ಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡಿದ ಯುವಕರನ್ನು ದೂಷಿಸಿದರು.
https://twitter.com/DavidJakso75281/status/1835665671209758802?t=6hSOqRFhbHomhoZHD957_w&s=08