ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಬಾಂಬ್ ಬೆದರಿಕೆ ಸಂದೇಶಗಳ ನಡುವೆ ಅನುಮಾನಾಸ್ಪದ ರೀತಿಯಲ್ಲಿ ಬ್ಯಾಗ್ ಒಂದು ಪತ್ತೆಯಾಗಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಣ್ಣ ತಿರುವು ಸಿಕ್ಕಿದೆ.
ಬೆಂಗಳೂರಿನ ರಾಮಮೂರ್ತಿನಗರದ ಫ್ಲೈಓವರ್ ಬಳಿ ಜಂಕ್ಷನ್ ನಲ್ಲಿ ಅನಾಥ ಬ್ಯಾಗ್ ಒಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬ್ಯಾಗ್ ಪರಿಶೀಲಿಸಿದ್ದಾರೆ.
ಬ್ಯಾಗ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಹಾಗೂ ಜನರು ನಿಟ್ಟಿಸುರುಬಿಟ್ಟಿದ್ದಾರೆ. ಬ್ಯಾಗ್ ನಲ್ಲಿ ಕೆಲ ಬಟ್ಟೆ ಹಾಗೂ ತಿಂಡಿ-ತಿನಿಸುಗಳಿದ್ದವು. ಅಸಲಿಗೆ ಈ ಬ್ಯಾಗ್ ಮಹಿಳೆಯೊಬ್ಬರದ್ದಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್ ನ್ನು ಮಹಿಳೆಯೊಬ್ಬರು ಫ್ಲೈ ಓವರ್ ಬಳಿಯ ಸರ್ಕಲ್ ಬಳಿ ಇಟ್ಟು ಅಲ್ಲಿಯೇ ಶೌಚಾಲಯಕ್ಕೆ ಹೋಗಿದ್ದರಂತೆ. ಬ್ಯಾಗ್ ನ್ನು ಸ್ಟೇಷನ್ ಗೆ ತಂದು ಪರಿಶೀಲಿಸಿದ ಪೊಲೀಸರು ಬಳಿಕ ಮಹಿಳೆಗೆ ಬ್ಯಾಗ್ ಒಪ್ಪಿಸಿದ್ದಾರೆ. ಬ್ಯಾಗ್ ಕಂಡು ಆತಂಕಕ್ಕೀಡಾಗಿದ್ದ ಜನರು ಸದ್ಯ ನಿರಾಳರಾಗಿದ್ದಾರೆ.