ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಕ್ಟೋಬರ್ ಕೊನೆಯ ವಾರದವರೆಗೆ ಬರೋಬ್ಬರಿ 16.3 ಮಿಲಿಯನ್ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು ತಮ್ಮ ಪ್ರಯಾಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷದ ಇದೇ ಸಾಲಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 6.61 ಮಿಲಿಯನ್ ಪ್ರಯಾಣಿಕರ ಸಂಖ್ಯೆ ದಾಖಲಾಗಿತ್ತು. ಆದರೆ ಈ ಬಾರಿ 16.30 ಮಿಲಿಯನ್ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಯಾಣಿಕರು ತಮ್ಮ ಆಗಮನ ಹಾಗೂ ನಿರ್ಗಮನಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ.
ಈ ಪೈಕಿ 14.34 ಮಿಲಿಯನ್ ಪ್ರಯಾಣಿಕರು ದೇಶಿಯ ವಿಮಾನ ಸಂಚಾರ ನಡೆಸಿದರೆ 1.96 ಮಿಲಿಯನ್ ಪ್ರಯಾಣಿಕರು ಅಂತರರಾಷ್ಟ್ರೀಯ ಪ್ರಯಾಣ ಬೆಳೆಸಿದ್ದಾರೆ. 2019 ಕ್ಕೆ ಹೋಲಿಸಿದರೆ ದೇಶಿಯ ವಿಮಾನ ಪ್ರಯಾಣಿಕರಲ್ಲಿ 102 ರಷ್ಟು ಹೆಚ್ಚಳವಾಗಿದ್ದರೆ, ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇಕಡ 85 ಹೆಚ್ಚಳ ಕಂಡುಬಂದಿದೆ.