ವರಮಹಾಲಕ್ಷ್ಮಿ ಹಬ್ಬ ಅಂದ್ಮೇಲೆ ಸಂಭ್ರಮ-ಸಡಗರ ಇದ್ದೇ ಇರುತ್ತೆ. ಶ್ರಾವಣ ಮಾಸ ಶುಕ್ರವಾರದಂದು ಬರುವ ಈ ಹಬ್ಬದ ದಿನ ಲಕ್ಷ್ಮಿ ಸರ್ವಭೂಷಿತೆ ಅಲಂಕಾರದಿಂದ ಕಂಗೊಳಿಸುತ್ತಿರುತ್ತಾಳೆ. ಕೆಲವರು ಹೂವಿನಿಂದ ಅಲಂಕಾರ ಮಾಡಿದ್ರೆ, ಇನ್ನೂ ಕೆಲವರು ನಾಣ್ಯ ಹಾಗೂ ನೋಟುಗಳ ರಾಶಿಯಿಂದ ಅಲಂಕಾರ ಮಾಡಿರುತ್ತಾರೆ. ಅದರಲ್ಲೂ ಕಮಲದ ಹೂ ಲಕ್ಷ್ಮಿಗೆ ಅಚ್ಚು ಮೆಚ್ಚು ಅನ್ನೊ ನಂಬಿಕೆ ಇದೆ. ಇದೇ ಕಾರಣಕ್ಕೆ ಲಕ್ಷ್ಮಿಗೆ ಕಮಲದ ಹೂವು ಇಟ್ಟು ಪೂಜಿಸುವುದು ಸಾಮಾನ್ಯ.
ಹೀಗೆ ಲಕ್ಷ್ಮಿ ಪೂಜೆಗೆ ಕಮಲದ ಹೂವು ತರಲು ಹೋದ 70 ವರ್ಷದ ವೃದ್ಧರೊಬ್ಬರು ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರಿನ ಗ್ರಾಮಾಂತರ ವ್ಯಾಪ್ತಿಯ ದೊಡ್ಡಬಳ್ಳಾಪುರ ಸಮೀಪದ ಕೋನಘಟ್ಟ ಗ್ರಾಮದ ಕೆರೆಯಲ್ಲಿ ಸಂಭವಿಸಿದೆ. ರೈತ ಕೃಷ್ಣಪ್ಪ ಅವರು ಹಬ್ಬದ ಪ್ರಯುಕ್ತ ಕಮಲದ ಹೂವನ್ನ ಕೀಳಲು ಮನೆಯ ಬಳಿ ಇರುವ ಕೆರೆಗೆ ಹೋದವರು, ತಡರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿರಲಿಲ್ಲ. ಮನೆಗೆ ಬರದ ಕೃಷ್ಟಪ್ಪನವರನ್ನ ಮನೆಯವರು ಹುಡುಕಿದ್ದಾರೆ.
ಎಷ್ಟು ಹುಡುಕಿದರೂ ಸಿಗದ ಕೃಷ್ಣಪ್ಪನವರನ್ನ ಕೊನೆಗೆ ಕೆರೆಯ ಬಳಿ ನೋಡಿದಾಗ. ಅಲ್ಲಿ ಕೆರೆಯ ದಡದಲ್ಲಿ ಪಾದರಕ್ಷೆ, ಮತ್ತು ಬಟ್ಟೆ ಇರುವುದನ್ನ ಗಮನಿಸಿ ಕೆರೆಯಲ್ಲಿ ನೋಡಿದ್ದಾರೆ. ರಾತ್ರಿ ಸಮಯವಾಗಿದ್ದರಿಂದ ಕೃಷ್ಣಪ್ಪನವರ ದೇಹ ಹುಡುಕಿ ತೆಗೆಯುವುದು ಸಾಧ್ಯವಾಗಿರಲಿಲ್ಲ. ಕೊನೆಗೆ ಬೆಳಿಗ್ಗೆ ಈಜುಗಾರರ ಸಹಾಯದಿಂದ ಮೃತದೇಹವನ್ನ ಹುಡುಕಿ ಹೊರ ತೆಗೆದಿದ್ದಾರೆ.
ಸದ್ಯಕ್ಕೆ ಮೃತ ಕೃಷ್ಣಪ್ಪನವರ ದೇಹವನ್ನ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇದೊಂದು ಅಸ್ವಾಭಾವಿಕ ಸಾವು ಎಂದು ಪರಿಗಣಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.