
ಬೆಂಗಳೂರು: ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ನೀರಿನ ದರ ಏರಿಕೆಯಾಗಲಿದೆ. ಈ ಬಗ್ಗೆ ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ರಾಮೋಜಿ ಗೌಡರು, ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಗಳು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಿದ್ದು, ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಹಾಗೂ ಕಾವೇರಿ ಸಂಪರ್ಕ ನೀಡಿರುವ ಮನೆಗಳಿಗೆ ಶೀಘ್ರ ನೀರು ಒದಗಿಸಬೇಕು ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ (BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾಪ ನೀಡಿದ್ದು, ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಧ್ಯದಲ್ಲೇ ನಗರದ ಶಾಸಕರ ಬಳಿ ಚರ್ಚಿಸಲಾಗುವುದು ಎಂದರು.
ಶಿವರಾತ್ರಿ ಕಳೆದಿದ್ದು ಬೇಸಿಗೆ ತೀವ್ರತೆ ಹೆಚ್ಚಾಗಿ ಉಷ್ಣಾಂಶ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಬಹಳ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. 7 ಸಾವಿರ ಕೊಳವೆಬಾವಿಗಳು ಬತ್ತಿದ್ದವು. ಹೀಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು. ಇದೇ 22ರಂದು ಜಲಸಂರಕ್ಷಣಾ ದಿನವಾಗಿದ್ದು ಒಂದು ತಿಂಗಳ ಕಾಲ ಜಲ ಸಂರಕ್ಷಣೆ ವಿಚಾರವಾಗಿ ಜಾಗೃತಿ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆಯನ್ನು ಪೂರ್ಣಗೊಳಿಸಿ ನೀರನ್ನು ಹೊರ ತರಲಾಗಿದೆ. 110 ಹಳ್ಳಿಗಳಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗುತ್ತಿಗೆದಾರರು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳನ್ನು ಕಟ್ಟಿದ್ದು, ಯಾರೊಬ್ಬರೂ ಬಿಡಬ್ಲ್ಯೂಎಸ್ಎಸ್ ಬಿ ಗೆ ನೀರಿನ ಸಂಪರ್ಕದ ಡೆಪಾಸಿಟ್ ಪಾವತಿ ಮಾಡಿಲ್ಲ. ಅನುಮತಿ ಪಡೆಯದೇ ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಅವರಿಗೆ ನೋಟೀಸ್ ನೀಡಲಾಗಿದೆ. 2014ರಿಂದ ಇಲ್ಲಿಯವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ನಾವು ಕನಿಷ್ಠ ಪಕ್ಷ ಒಂದು ಪೈಸೆಯಾದರೂ ನೀರಿನ ದರ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಮಂಡಳಿ ಪ್ರತಿ ವರ್ಷ ಅನುಭವಿಸುತ್ತಿರುವ ಸುಮಾರು 1 ಸಾವಿರ ಕೋಟಿ ನಷ್ಟವನ್ನು ತಪ್ಪಿಸಬಹುದಾಗಿದೆ. ಮಂಡಳಿಯ ವಿದ್ಯುತ್ ಬಿಲ್ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಂಡಳಿಯವರು 7-8 ಪೈಸೆ ಏರಿಕೆಗೆ ಮುಂದಾಗಿದ್ದರು. ನಾನು ಸಧ್ಯಕ್ಕೆ 1 ಪೈಸೆಯಷ್ಟು ಮಾಡಿ ಸಾಕು ಎಂದು ಹೇಳಿದ್ದೇನೆ. ಪಾಲಿಕೆ ಬಜೆಟ್ ಕುರಿತ ಸಭೆ ವೇಳೆ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ನೀರಿನ ಸಂಪರ್ಕ ಹಾಗೂ ಟ್ಯಾಂಕರ್ ಗಳ ವಿಚಾರವಾಗಿ ಕ್ರಮ ಕೈಗೊಳ್ಳಲಾಗಿದ್ದು, ಟ್ಯಾಂಕರ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳ ಮಾಡುವ ಉದ್ದೇಶದಿಂದ ಬತ್ತಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇವೆ. ಖಾಸಗಿ ಟ್ಯಾಂಕರ್ ಗಳದ್ದು ದೊಡ್ಡ ದಂಧೆಯಾಗಿದೆ. ಹೀಗಾಗಿ ಇದಕ್ಕಾಗಿ ಕನಿಷ್ಠ ದರ ನಿಗದಿ ಮಾಡಲಾಗಿದೆ. ಎಲ್ಲಿ ತುರ್ತಾಗಿ ನೀರನ್ನು ಪೂರೈಸಬಹುದೋ ಅದಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಭವಿಷ್ಯದ ಉದ್ದೇಶದಿಂದ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಪ್ಲಾನ್ ಸಿದ್ಧವಾಗಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.