ಸಹೋದರಿಯೊಂದಿಗೆ ಶಾಪಿಂಗ್ ಮಾಲ್ ಗೆ ತೆರಳಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಈ ವೇಳೆ ಚಾಕೊಲೇಟ್ ಕದ್ದಿದ್ದು, ಇದರ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವಮಾನ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪ್ರಕರಣದ ವಿವರ: ಆಲಿಪುರ್ ದೌರ್ ಜಿಲ್ಲೆಯ ಈ ವಿದ್ಯಾರ್ಥಿನಿ ಸೆಪ್ಟೆಂಬರ್ 29ರಂದು ಶಾಪಿಂಗ್ ಮಾಲ್ ಗೆ ತೆರಳಿದ್ದು, ಈ ವೇಳೆ ಚಾಕೊಲೇಟ್ ಕದ್ದಿದ್ದಳು. ಬಳಿಕ ಆಕೆಗೆ ತಪ್ಪಿನ ಅರಿವಾಗಿದ್ದು ಮಾಲ್ ಸಿಬ್ಬಂದಿಯ ಕ್ಷಮೆ ಯಾಚಿಸಿ ಹಣವನ್ನೂ ಪಾವತಿಸಿದ್ದಳು.
ಇಷ್ಟಾದರೂ ಸಹ ಮಾಲ್ ಸಿಬ್ಬಂದಿ ಚಾಕೊಲೇಟ್ ಕದ್ದ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆಯೇ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.