ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ಹೌರಾ ಜಿಲ್ಲೆಯ ಉಲುಬೇರಿಯಾ ಉತ್ತರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನ ಮನೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ ಮತ್ತು ನಾಲ್ಕು ವಿವಿಪ್ಯಾಟ್ ಗಳು ಪತ್ತೆಯಾಗಿವೆ.
31 ವಿಧಾನಸಭೆ ಕ್ಷೇತ್ರಗಳಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ನೀಡಿರುವ ಮಾಹಿತಿಯ ಪ್ರಕಾರ, ತುಳಸಿಬೇರಿಯಾದ ಟಿಎಂಸಿ ನಾಯಕ ಗೌತಮ್ ಘೋಷ್ ನಿವಾಸದಲ್ಲಿ ಮತಯಂತ್ರ ಪತ್ತೆಯಾಗಿವೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.
ಉಲುಬೇರಿಯಾ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಅವರು, ಚುನಾವಣೆ ಅಧಿಕಾರಿಗಳ ಹಸ್ತಕ್ಷೇಪದಿಂದ ಈ ರೀತಿ ಆಗಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಚುನಾವಣಾಧಿಕಾರಿಗೆ ಘೆರಾವ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ.
ಮತಗಟ್ಟೆಯಲ್ಲಿ ಭದ್ರತಾ ಸಿಬ್ಬಂದಿ ನಿದ್ದೆ ಮಾಡುವ ಸಂದರ್ಭದಲ್ಲಿ ಮತಯಂತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಲಾಗಿದೆ. ಇವು ಮತಗಟ್ಟೆಯಲ್ಲಿ ಬಳಕೆ ಮಾಡಿಲ್ಲ. ಹೆಚ್ಚುವರಿಯಾಗಿ ಕಾಯ್ದಿರಿಸಲಾದ ಮತಯಂತ್ರಗಳಾಗಿವೆ. ಸೆಕ್ಟರ್ ಆಫೀಸರ್ ನನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.