ಕೋಲ್ಕತ್ತಾ: ಮಾಡೆಲ್ ಮೇಲೆ ನೈಟ್ ಕ್ಲಬ್ ಮ್ಯಾನೇಜರ್ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ಗರ್ಭಪಾತ ಮಾಡುವಂತೆ ಬಲವಂತಪಡಿಸಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಯುವತಿ ಸೋನಾರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನೈಟ್ ಕ್ಲಬ್ ಮ್ಯಾನೇಜರ್ ತನ್ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದಾಗಿ ರೂಪದರ್ಶಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತು. ನಂತರ ಇವರಿಬ್ಬರ ಪೋಷಕರು ಈ ತಿಂಗಳ ಅಂತ್ಯದೊಳಗೆ ಮದುವೆ ಮಾಡಲು ಒಪ್ಪಿದ್ದರು ಎಂದು ಹೇಳಲಾಗಿದೆ.
ಆಗಸ್ಟ್ 3 ರಂದು ಸಂತ್ರಸ್ಥೆಯ ನಿಶ್ಚಿತ ವರ ಮನೆಗೆ ಬರುವಂತೆ ತಿಳಿಸಿದ್ದ. ತನ್ನ ಪೋಷಕರು ಆಕೆಯನ್ನು ಭೇಟಿಯಾಗಲು ಬಯಸುವುದಾಗಿ ಹೇಳಿದ್ದ. ಇದನ್ನು ನಂಬಿ ಆತನ ಮನೆಗೆ ಬಂದಾಗ ಆತ ಒಬ್ಬನೇ ಇದ್ದ ಎಂದು ಯುವತಿ ಆರೋಪಿಸಿದ್ದಾರೆ. ನಂತರ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತನ್ನ ದೂರಿನಲ್ಲಿ ಸಂತ್ರಸ್ಥೆ ವಿವರಿಸಿದ್ದಾಳೆ.
ಇನ್ನು ಘಟನೆಯ ಎರಡು ವಾರಗಳ ನಂತರ, ಯುವತಿ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯಕೀಯ ತಪಾಸಣೆಗೆ ಹೋದಾಗ ಆಕೆ ಗರ್ಭಿಣಿಯಾಗಿರುವ ಬಗ್ಗೆ ತಿಳಿದುಬಂದಿದೆ. ಇದನ್ನು ತಿಳಿದ ಆಕೆಯ ನಿಶ್ಚಿತ ವರ ಹಾಗೂ ಅವನ ಮನೆಯವರು ಗರ್ಭಪಾತ ಮಾಡುವಂತೆ ಬಲವಂತಪಡಿಸಿದ್ದಾರೆ ಎಂದು ತನ್ನ ದೂರಿನಲ್ಲಿ ಸಂತ್ರಸ್ಥೆ ವಿವರಿಸಿದ್ದಾಳೆ.