ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರೈಲು ನಿಲ್ದಾಣದಲ್ಲಿ ಟಿಎಂಸಿ ಸಚಿವ ಮತ್ತು ಬೆಂಬಲಿಗರರ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸಚಿವರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.
ಸಚಿವ ಜಾಕಿರ್ ಹುಸೇನ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಮುರ್ಷಿದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ಅಪರಿಚಿತ ದಾಳಿಕೋರರು ಬಾಂಬ್ ಸ್ಫೋಟಿಸಿದ್ದರಿಂದ ಪಶ್ಚಿಮ ಬಂಗಾಳ ಸಚಿವ ಜಾಕೀರ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರ ಜೊತೆಯಲ್ಲಿದ್ದವರು ಗಾಯಗೊಂಡಿದ್ದಾರೆ.
ರೈಲು ನಿಲ್ದಾಣಕ್ಕೆ ವಿಧಿವಿಜ್ಞಾನ ತಂಡ ತೆರಳಿದೆ. ಕಾರ್ಮಿಕ ರಾಜ್ಯ ಸಚಿವರಾದ ಜಾಕೀರ್ ಹುಸೇನ್ ರಾತ್ರಿ 10 ಗಂಟೆ ಸುಮಾರಿಗೆ ಕೋಲ್ಕತ್ತಾಗೆ ತೆರಳು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ನಿಲ್ದಾಣದ 2 ನೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ವೇಳೆಯಲ್ಲಿ ಬಾಂಬ್ ಸ್ಪೋಟವಾಗಿದೆ.
ಗಾಯಾಳುಗಳನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರಂಭಿಕ ಚಿಕಿತ್ಸೆಯ ನಂತರ ಅವರನ್ನು ಕೋಲ್ಕತಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ರಾಜ್ಯ ಕ್ಯಾಬಿನೆಟ್ ಸಚಿವ ಫಿರ್ಹಾದ್ ಹಕೀಮ್ ಅವರು ದಾಳಿಯನ್ನು ಖಂಡಿಸಿದರು ಮತ್ತು ಸಚಿವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
ನನ್ನ ಪಕ್ಷದ ಸಹೋದ್ಯೋಗಿ ಜಾಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ನಮ್ಮ ರಾಜಕೀಯದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಬಂಗಾಳ ಅಭಿಯಾನದ ಪ್ರಧಾನ ಮುಖವಾಗಿರುವ ಮಾಜಿ ಟಿಎಂಸಿ ನಾಯಕ ಸುವೆಂದು ಅಧಿಕಾರಿ ಅವರೂ ಘಟನೆಯನ್ನೂ ಖಂಡಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೂ, ಈ ದಾಳಿಯನ್ನು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಬಾಂಬ್ ದಾಳಿಯನ್ನು ನಾನು ಖಂಡಿಸುತ್ತೇನೆ. ಗಾಯಗೊಂಡವರನ್ನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಕೂಡ ಈ ದಾಳಿಯನ್ನು ಖಂಡಿಸಿದ್ದು, ಕೂಡಲೇ ಅಪರಾಧಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.