ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹತ್ಯೆ ಮಾಡಿ ಆಕೆಯ ತಲೆ ಕತ್ತರಿಸಿ ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿರುವುದು ಕಂಡುಬಂದಿದೆ. ನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆರೋಪಿಯನ್ನು 40 ವರ್ಷದ ಗೌತಮ್ ಗುಚ್ಚೈತ್ ಎಂದು ಗುರುತಿಸಲಾಗಿದೆ. ಚಿಸ್ತಿಪುರ್ ಬಸ್ ನಿಲ್ದಾಣದ ಬಳಿ ರಕ್ತಮಯವಾಗಿದ್ದ ಪತ್ನಿಯ ತಲೆಯನ್ನು ಹಿಡಿದು ಗೌತಮ್ ಹೋಗಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಈ ದೃಶ್ಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ತಕ್ಷಣ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ತಲೆ ಹಿಡಿದು ತಿರುಗಾಡುತ್ತಿದ್ದ ಗೌತಮ್ ನನ್ನು ಬಂಧಿಸಿದ್ದಾರೆ. ಗುಚ್ಚೈತ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದಿದ್ದಾನೆ. ನಂತರ ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ತುಂಡರಿಸಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಗುಚ್ಚೈತ್ ನನ್ನು ಬಂಧಿಸಿದ ಪೊಲೀಸರು ಅವನ ಮನೆಗೆ ಹೋಗಿ ಪರಿಶೀಲಿಸಿದ್ದಾರೆ. ಪತ್ನಿಯ ಶವ ಕಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.