
ಕೋಲ್ಕತ್ತಾ: ಸರ್ಕಾರಿ ಶಾಲೆ ಮತ್ತು ಮದರಸಾದಲ್ಲಿ ಕಲಿಯುತ್ತಿರುವ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಹಿ ಸುದ್ದಿ ನೀಡಿದ್ದಾರೆ.
ಪ್ರತಿ ವಿದ್ಯಾರ್ಥಿಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಜಮಾ ಮಾಡಲಿದ್ದು, ಇದರಲ್ಲಿ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 9.5 ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಗೆ ಯೋಜನೆಯಿಂದ ಅನುಕೂಲವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಮೊದಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಕೇಂದ್ರ ಸರ್ಕಾರ ಚೀನಾ ವಸ್ತುಗಳ ಮೇಲೆ ನಿರ್ಬಂಧ ಹೇರಿದ ಕಾರಣ ನಗದು ವರ್ಗಾವಣೆಗೆ ತೀರ್ಮಾನಿಸಲಾಗಿದೆ. ಸರ್ಕಾರಿ ಶಾಲೆ ಮತ್ತು ಮದರಸಾ ಮಕ್ಕಳ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಹಣ ನೀಡಲಾಗುವುದು. ಟ್ಯಾಬ್ಲೆಟ್ ಉತ್ಪಾದಿಸುವ ಕಂಪನಿಗಳೊಂದಿಗೆ ಶಿಕ್ಷಣ ಇಲಾಖೆ ಸಮಾಲೋಚನೆ ನಡೆಸಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಒದಗಿಸಲಾಗುವುದು ಎಂದು ಹೇಳಲಾಗಿದೆ.