ಕೋಲ್ಕತ್ತಾ: ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಮುನ್ನ ಬಿಜೆಪಿ ನಾಯಕ ರಾಕೇಶ್ ಸಿಂಗ್ ಮಾಡಿರುವ ಫೇಸ್‌ಬುಕ್ ಪೋಸ್ಟ್ ಬಗ್ಗೆ ಕಾನೂನು ತಜ್ಞರು ಪಶ್ಚಿಮ ಬಂಗಾಳದ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಜೈಲಿನ ಆವರಣದೊಳಗೆ ಮೊಬೈಲ್ ಫೋನ್ ಬಳಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರ ಬಗ್ಗೆ ತನಿಖೆ ನಡೆಸಬೇಕು ಎಂದು ಕಾನೂನು ತಜ್ಞರು ಒತ್ತಾಯಿಸಿದ್ದಾರೆ. ನವೆಂಬರ್ 24 ರಂದು ಕೋಲ್ಕತ್ತಾ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ಸಿಂಗ್ ಸೋಮವಾರ ಜೈಲಿನಿಂದ ಬಿಡುಗಡೆಯಾಗಬೇಕಿತ್ತು.
ಮಾದಕವಸ್ತು ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23, 2021 ರಂದು ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ನಾಲ್ವರು ಶ್ಯೂರಿಟಿಗಳಿಂದ ತಲಾ 50,000 ರೂ.ನಂತೆ 2 ಲಕ್ಷ ರೂ.ಗಳ ಜಾಮೀನು ಬಾಂಡ್ ಒದಗಿಸುವಂತೆ ನ್ಯಾಯಾಲಯವು ಆದೇಶಿಸಿತ್ತು. ಅದರಂತೆ ಸೋಮವಾರ ಸಿಂಗ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಭಾನುವಾರ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಮತ್ತು ಸೋಮವಾರ ಸಂಜೆ 7 ಗಂಟೆಗೆ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಸಿಂಗ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಸಾಮಾಜಿಕ ಅಂತರ ಕಾಪಾಡಬೇಕಿರುವುದರಿಂದ ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನ ಮುಂದೆ ಜನಸಂದಣಿ ಸೇರದಂತೆ ಅವರು ತಮ್ಮ ಹಿತೈಷಿಗಳಿಗೆ ವಿನಂತಿಸಿದ್ದಾರೆ.
ರಾಕೇಶ್ ಸಿಂಗ್ ಅವರು ಫೇಸ್ಬುಕ್ ನಲ್ಲಿ ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ರಾಕೇಶ್ ಸಿಂಗ್ ಅವರ ಫೇಸ್‌ಬುಕ್ ಖಾತೆಯಿಂದ ಪರಿಚಯಸ್ಥರೊಬ್ಬರು ಪೋಸ್ಟ್ ಮಾಡಿದ್ದಾರೆ ಎಂದು ಭಾವಿಸಲಾಗಿದ್ದರೂ, ಪೋಸ್ಟ್‌ನಲ್ಲಿರುವ ಇಂಗ್ಲಿಷ್, ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿನ ದೀರ್ಘ ಸಂದೇಶದಲ್ಲಿ ಅವರು ಬದಲಿಗೆ ಐ (ನಾನು) ಎಂದು ನಮೂದಿಸಲಾಗಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಕೋರ್ಟ್ ಜಾಮೀನು ನೀಡಿದರೂ, ಬಂಧಿತ ವ್ಯಕ್ತಿ ಜೈಲಿನೊಳಗೆ ಮೊಬೈಲ್ ಫೋನ್ ಬಳಸುವಂತಿಲ್ಲ. ಈ ಪ್ರಕರಣದಲ್ಲಿ ಜೈಲು ಅಧಿಕಾರಿಗಳ ಗಮನಕ್ಕೆ ಬಾರದೆ ಕೈದಿಯ ಕೈಗೆ ಮೊಬೈಲ್ ಬಂದಿದ್ದು ಹೇಗೆ ? ಇದರ ಬಗ್ಗೆ ತನಿಖೆಯಾಗಬೇಕು ಎಂದು ವಕೀಲ ಅನಿರ್ಬನ್ ಗುಹಾ ಠಾಕುರ್ತಾ ಪ್ರತಿಪಾದಿಸಿದ್ದಾರೆ.
ಸಿಂಗ್ ಅವರನ್ನು ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಗಲ್ಸಿಯಲ್ಲಿ ಕೋಲ್ಕತ್ತಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು.
ಆರೋಪಿ ಬಳಿಯಿಂದ ಯಾವುದೇ ಮಾದಕವಸ್ತು ಪತ್ತೆಯಾಗಿಲ್ಲ ಎಂದು ಸಿಂಗ್ ಪರ ವಕೀಲ ರಾಜದೀಪ್ ಮಜುಂದಾರ್ ಅವರು ಕೋಲ್ಕತ್ತಾ ಹೈಕೋರ್ಟ್‌ನಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪಿತೂರಿಯ ಬಗ್ಗೆ ಯಾವುದೇ ಪುರಾವೆಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ ಎಂದು ಮಜುಂದಾರ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಬಳಿಕ ನ್ಯಾಯಾಲಯ ನವೆಂಬರ್ 24ರಂದು ಅವರಿಗೆ ಷರತ್ತು ಸಹಿತ ಜಾಮೀನು ಮಂಜೂರು ಮಾಡಿತ್ತು.