ತನ್ನದೇ ಆದ ವಿಶಿಷ್ಠ ಪರಿಮಳದಿಂದ ಪ್ರತಿಯೊಂದು ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನಲ್ಲಿ ಔಷಧೀಯ ಗುಣ ಇದೆ. ಕೊತ್ತಂಬರಿ ಸೊಪ್ಪು ಅಡುಗೆಗಷ್ಟೇ ಅಲ್ಲದೆ ಅನೇಕ ರೋಗಗಳನ್ನು ದೂರ ಮಾಡುವಲ್ಲಿ ಬಹಳ ಸಹಕಾರಿಯಾಗಿದೆ.
ಕೊತ್ತಂಬರಿ ಸೊಪ್ಪು ವಿಟಮಿನ್ ಎ, ಬಿ, ಸಿ, ಕೆ, ಕ್ಯಾಲ್ಸಿಯಮ್, ಫಾಸ್ಫರಸ್, ಪೊಟಾಶಿಯಂ, ಸೋಡಿಯಂ ಮತ್ತು ಮ್ಯಾಗ್ನೀಶಿಯಂ ಮುಂತಾದ ಸತ್ವಗಳನ್ನು ಹೊಂದಿದೆ. ಇವುಗಳು ನಮ್ಮ ಶರೀರವನ್ನು ಆರೋಗ್ಯವಾಗಿಡುವುದರ ಜೊತೆಗೆ ನಮ್ಮ ದೇಹದ ಇಮ್ಯೂನ್ ಸಿಸ್ಟಮ್ ಹೆಚ್ಚಿಸಿ ಅನೇಕ ರೋಗಗಳನ್ನು ದೂರ ಮಾಡುತ್ತದೆ.
ಲಿವರ್ ಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕೊತ್ತಂಬರಿ ಸೊಪ್ಪಿನಿಂದ ದೂರವಾಗುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಆಲ್ಕಲೈಡ್ ಗಳು ಮತ್ತು ಫ್ಲೇವನೈಡ್ ಗಳು ಇವೆ. ಇವು ಪಿತ್ತ ಮತ್ತು ಕಾಮಾಲೆಯಂತಹ ಪಿತ್ತಜನಕಾಂಗದ ಖಾಯಿಲೆಗಳನ್ನು ಗುಣಪಡಿಸುತ್ತದೆ.
ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಜೀರ್ಣಕ್ರಿಯೆ ಮತ್ತು ಕರುಳಿನ ಸಮಸ್ಯೆಗಳು ದೂರವಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆದಾಗ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಹಸಿವು ಚೆನ್ನಾಗಿ ಆಗುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿರುವ ಎಂಟಿಆಕ್ಸಿಡೆಂಟ್ ಗುಣ, ಫ್ರೀ ರೆಡಿಕಲ್ಸ್ ನಿಂದ ಉಂಟಾಗುವ ಸೆಲ್ಯುಲರ್ ಡೆಮೇಜ್ ಅನ್ನು ತಡೆಯುತ್ತವೆ. ನಿರಂತರವಾಗಿ ಕೊತ್ತಂಬರಿ ಸೊಪ್ಪನ್ನು ಸೇವಿಸುವುದುರಿಂದ ಶರೀರದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿನಿತ್ಯ ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ಅನಗತ್ಯವಾದ ಸೋಡಿಯಂ ಮೂತ್ರದ ಮೂಲಕ ಹೊರ ಹೋಗುತ್ತದೆ. ಇದರಿಂದ ದೇಹವು ಫಿಟ್ ಆಗಿರುತ್ತದೆ. ಕೊತ್ತುಂಬರಿ ಸೊಪ್ಪು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಕೊತ್ತುಂಬರಿ ಸೊಪ್ಪನ್ನು ಬಳಕೆ ಮಾಡಬೇಕು. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.