ಬೆಂಗಳೂರು : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂಘೋಷಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಯುವನಿಧಿ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು ಹಣ ಪಡೆಯಬೇಕಾದ್ರೆ ಪ್ರತಿ ತಿಂಗಳಲ್ಲೂ ತಮಗೆ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಬೇಕು. ಒಂದು ವೇಳೆ ಮಾಹಿತಿ ಅಪ್ಲೋಡ್ ಮಾಡದೇ ಇದ್ದರೆ ಅಂಥವರಿಗೆ ಯುವನಿಧಿ ಹಣ ಖಾತೆಗೆ ಜಮಾ ಆಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
2023 ರಲ್ಲಿ ಪದವಿ/ ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ/ಖಾಸಗಿ/ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮಒನ್, ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ “ಯುವನಿಧಿ” ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ.ಗಳು ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ.ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ.