![](https://kannadadunia.com/wp-content/uploads/2023/11/anna-Bhagya-2.jpg)
ರಾಜ್ಯ ಸರ್ಕಾರದ ಅನ್ನಭಾಗ್ಯ (ಡಿಬಿಟಿ) ಗ್ಯಾರಂಟಿ ಯೋಜನೆಯ ವ್ಯಾಪ್ತಿಗೆ ಒಳಪಡದಂತಿರುವ ವ್ಯಕ್ತಿಗಳು ಒಂದು ವೇಳೆ ಅರ್ಹರು ಎಂದು ಕಂಡುಬಂದಲ್ಲಿ ಅಥವಾ ಬ್ಯಾಂಕ್ ಖಾತೆ ಸಮಸ್ಯೆ ಹೊಂದಿದ್ದಲ್ಲಿ ಅಂತಹ ಸಮಸ್ಯೆಗಳನ್ನು ಸಂವಿಧಾನ ಜಾಗೃತಿ ಜಾಥಾ ಸಮಯದಲ್ಲಿ ಸರಿಪಡಿಸಲಾಗುವುದು.
ಜ.26 ರಿಂದ ಫೆ.23 ರವರೆಗೆ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿದ್ದು, ಮಾರ್ಗ ನಕ್ಷೆಯಂತೆ ಜಾಥಾವು ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಇದೇ ಸಂದರ್ಭದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ಯೋಜನೆಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಅನ್ನಭಾಗ್ಯ(ಡಿಬಿಟಿ) ಯೋಜನೆಯ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಒಂದು ವೇಳೆ ಅರ್ಹರು ಎಂದು ಕಂಡುಬಂದಲ್ಲಿ ಸೌಲಭ್ಯವನನು ಪಡೆಯಲು ನೆರವು ನೀಡಲಾಗುವುದು. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ಯೋಜನೆಯ ಹೊರಗೆ ಉಳಿದಿದ್ದಲ್ಲಿ ಅಂತಹ ವ್ಯಕ್ತಿಗಳ ಬ್ಯಾಂಕ್ ಖಾತೆಯನ್ನು ಸರಿಪಡಿಸಲಾಗುವುದು.
ಕೊಪ್ಪಳ ತಾಲ್ಲೂಕಿನಲ್ಲಿ ಜಾಥಾ ಸಂಚರಿಸಿದ 39 ಗ್ರಾಮಗಳಿಂದ 158 ಫಲಾನುಭವಿಗಳ ಖಾತೆಗಳನ್ನು ಸರಿಪಡಿಸಿ ಅನ್ನಭಾಗ್ಯ ಗ್ಯಾರಂಟಿ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಬಾಕಿ ಉಳಿದ ಅರ್ಹ ಫಲಾನುಭವಿಗಳು ತಮ್ಮ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.