ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಮಾಜಿ ಸಚಿವ ಬಿ.ಶಿವರಾಮ್ ಬೇಲೂರು ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದರು. ಟಿಕೆಟ್ ಆಕಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಬಿ.ಶಿವರಾಮ್ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ನಮ್ಮ ಕಾರ್ಯಕರ್ತರಲ್ಲಿ ಒಗ್ಗಟ್ಟು ಇಲ್ಲದ ಕಾರಣ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಗಿದೆ ಎಂದು ಹೇಳಿದರು. ಇದೇ ವೇಳೆ ಆಗಮಿಸಿದ ಕಳೆದ ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರ್ಯಾನೈಟ್ ರಾಜಶೇಖರ್ ಹಾಗೂ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಬಿ.ಶಿವರಾಮ್ ಹಾಗೂ ರಾಜಶೇಖರ್ ಬೆಂಬಲಿಗರ ನಡುವೆ ವಾಗ್ವಾದ ಆರಂಭವಾಗಿ, ಗಲಾಟೆ ವಿಕೋಪಕ್ಕೆ ತಿರುಗಿದೆ. ಇಬ್ಬರು ಮುಖಂಡರ ಬೆಂಬಲಿಗರು ಕೈಕೈಮಿಲಾಯಿಸಿಕೊಂಡಿದ್ದಾರೆ. ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಲಾಟೆ ಹೆಚ್ಚುತ್ತಿದ್ದಂತೆ ಇಬ್ಬರು ಮುಖಂದರು ಸಭೆಯ ಸ್ಥಳದಿಂದ ತೆರಳಿದ್ದಾರೆ.