ಶಿವಮೊಗ್ಗ: ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್. ಈಶ್ವರಪ್ಪ ಚುನಾವಣೆಯಲ್ಲಿ ಉಳಿಯುವ ಬಗ್ಗೆ ಅನುಮಾನವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರ ಸ್ಪರ್ಧೆ ಖಚಿತವೇ, ಇಲ್ಲವೇ ಎನ್ನುವುದು ಏಪ್ರಿಲ್ 19ರ ನಂತರ ತಿಳಿಯಲಿದೆ. ಒಂದು ವೇಳೆ ಈಶ್ವರಪ್ಪ ಅವರು ಕಣದಲ್ಲಿ ಉಳಿದರೂ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ತೊಂದರೆಯಾಗುವುದಿಲ್ಲ. ಈಶ್ವರಪ್ಪ ಅವರು ಪಡೆಯುವ ಮತಗಳು ಬಿಜೆಪಿಯದ್ದೇ ಆಗಿರುತ್ತದೆ. ಬಿಜೆಪಿಗೆ ಅದರ ಹೊಡೆತ ಬೀಳುತ್ತದೆ ಎಂದು ತಿಳಿಸಿದ್ದಾರೆ.
ರಾಜಕಾರಣದಲ್ಲಿ ಅಧಿಕಾರದ ಅವಕಾಶ ನೀಡಿದಾಗ ಮಾತ್ರ ಯಾರದ್ದೇ ಆಗಲಿ ಶಕ್ತಿ ಏನೆಂಬುದು ಗೊತ್ತಾಗುತ್ತದೆ. ರಾಘವೇಂದ್ರ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಸಾಧನೆ ಏನೂ ಇರಲಿಲ್ಲ. ಗೀತಾ ಶಿವರಾಜಕುಮಾರ್ ಅವರಿಗೆ ಒಮ್ಮೆ ಅವಕಾಶ ನೀಡಿದಲ್ಲಿ ಅವರು ಸಾಮರ್ಥ್ಯ ಸಾಬೀತುಪಡಿಸುತ್ತಾರೆ ಎಂದು ತಿಳಿಸಿದ್ದಾರೆ.