ಬಳ್ಳಾರಿ: ದೇವರ ಮೂರ್ತಿ ಕೂರಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕಲ್ಲುತೂರಾಟ ನಡೆಸಿರುವ ಘಟನೆ ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ ನಡೆದಿದೆ.
ಪವಾಡ ಪುರುಷ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದೆ. ಮುಂಜಾಗೃತಾ ಕ್ರಮವಾಗಿ ಕೊಳಗಲ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕೂರಿಸಲಾಗಿತ್ತು. ಈ ಮೂರ್ತಿ ತೆರವುಗೊಳಿಸುವಂತೆ ಇನ್ನೊಂದು ಸಮುದಾಯದ ಗುಂಪು ಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ಮೂರ್ತಿ ತೆರವಿಗೆ ಆದೇಶ ನೀಡಿತ್ತು. ಆದರೆ ಪವಾಡ ಪುರುಷ ಎರ್ರಿಸ್ವಾಮಿ ಮೂರ್ತಿ ತೆರವಿಗೆ ಬಿಡಲ್ಲ ಎಂದು ಮತ್ತೊಂದು ಸಮುದಾಯದ ಗುಂಪು ಪಟ್ಟು ಹಿಡಿದಿದೆ.
ಎರಡೂ ಸಮುದಾಯಗಳ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕಲ್ಲು ತೂರಾಟ ನಡೆದಿದೆ. ಉದ್ವಿಗ್ನಗೊಂಡ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಮೂವರು ಪೊಲೀಸ್ ಸಿಬಂದಿಗಳು ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.