ಬಳ್ಳಾರಿ: ಮೈಸೂರಿನಲ್ಲಿ ಕಳ್ಳರಿಗೆ ಸಾಥ್ ನೀಡಿದ್ದ ಹೆಡ್ ಕಾನ್ಸ್ ಟೇಬಲ್ ಬಂಧನಕ್ಕೀಡಾದ ಬೆನ್ನಲ್ಲೇ ಬಳ್ಳಾರಿಯಲ್ಲಿಯೂ ಇಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸಪ್ಪನೇ ಕಳ್ಳನಾಗಿ ಲಕ್ಷ ಲಕ್ಷ ಲೂಟಿ ಮಾಡಿದ್ದಾನೆ.
ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮೆಹಬೂಬ್ ಪಾಷಾ ಬಂಧಿತ ಆರೋಪಿ. ಕಳ್ಳರು ಕದ್ದ ಮಾಲಿನಲ್ಲೇ ತಾನೂ ಪಾಲು ಪಡೆದು ಪ್ರಕರಣ ಮುಚ್ಚಿ ಹಾಕುತ್ತಿದ್ದ ಎಂದು ತಿಳಿದುಬಂದಿದೆ.
ಸೆ.12ರಂದು ರಾಯದುರ್ಗ ಬಸ್ ನಿಲ್ದಾಣದತ್ತ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಕಣ್ಣಿಗೆ ಖಾರದಪುಡಿ ಎರಚಿ 22 ಲಕ್ಷದ 99 ಸಾವಿರ ನಗದು ಹಾಗೂ 318 ಗ್ರಾಂ ಚಿನ್ನಾಭರಣವನ್ನು ದರೋಡೆ ಗ್ಯಾಂಗ್ ವೊಂದು ದೋಚಿತ್ತು. ಪ್ರಕರಣ ಸಂಬಂಧ ತೌಸೀಫ್, ಜಾವಿದ್, ಪೀರ್, ದಾದಾ ಖಲಂದರ್, ಮುಸ್ತಾಕಾ ಅಲಿ ರೆಹಮಾನ್, ಆರಿಫ್ ಸೇರಿ 7 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಏಳು ಜನರ ಜೊತೆ ಸೇರಿ ಹೆಡ್ ಕಾನ್ಸ್ ಟೇಬಲ್ ಮಹಬೂಬ್ ಪಾಷಾ ಹಣ ಲೂಟಿ ಮಾಡಿದ್ದ. ಪ್ರಮುಖ ಆರೋಪಿ ಆಸೀಫ್ ಹಾಗೂ ಮೆಹಮೂಬ್ ಪಾಷಾ ಅತ್ಮೀಯ ಗೆಳೆಯರಾಗಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಹೆಡ್ ಕಾನ್ಸ್ ಟೇಬಲ್ ನ ಕಳ್ಳತನ ಬೆಳಕಿಗೆ ಬಂದಿದೆ. ಸದ್ಯ ಬ್ರೂಸ್ ಠಾಣೆ ಪೊಲೀಸರು ಹೆಡ್ ಕಾನ್ಸ್ ಟೇಬಲ್ ಮೆಹಬೂಬ್ ಪಾಷಾನನ್ನೂ ಬಂಧಿಸಿದ್ದಾರೆ.