ಬಳ್ಳಾರಿ: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಮರಣ ಮೃದಂಗ ಮುಂದುವರೆದಿದೆ. ಹೆರಿಗೆಗೆ ದಾಖಲಾಗಿದ್ದ ಮತ್ತೋರ್ವ ಮಹಿಳೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಎರಡು ವಾರಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ ವಾರ ಮೂವರು ಬಾಣಂತಿಯರು ಸಾವನ್ನಪ್ಪಿದ್ದರು. ನಿನ್ನೆ ಕೂಡ ಓರ್ವ ಬಾಣಂತಿ ಮೃತಪಟ್ಟಿದ್ದರು. ಇದೀಗ ಇಂದು ಬೆಳಿಗ್ಗೆ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಬಾಣಂತಿಯರ ಸರಣಿ ಸಾವು ಜಿಲ್ಲೆ ಜನರನ್ನು ಬೆಚ್ಚಿ ಬೀಳಿಸಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ 20 ವರ್ಷದ ಮಹಾಲಕ್ಷ್ಮೀ ಎಂಬುವವರು ಮೃತಪಟ್ಟಿದ್ದಾರೆ. ಕೂಡ್ಲಗಿ ತಾಲೂಕಿನ ಸಿ.ಎಸ್.ಪುರ ನಿವಾಸಿಯಾಗಿದ್ದ ಮಹಾಲಕ್ಷ್ಮೀ ಭಾನುವಾರ ಹೆರಿಗೆಗೆ ಎಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆದರೆ ಬಾಣಂತಿ ಮಹಾಲಕ್ಷ್ಮೀ ಸಾವಿನ ಬಗ್ಗೆ ವೈದ್ಯರು ಹೇಳುವುದೇ ಬೇರೆ. ಮಹಾಲಕ್ಷ್ಮೀ ಆಸ್ಪತ್ರೆಗೆ ಬರುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೆಮ್ಮು ಹಾಗೂ ಇತರೆ ಕಾಯಿಲೆಯಿಂದಾಗಿ ಇಂದು ಮೃತಪಟ್ಟಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ತಿಳಿಸಿದ್ದಾರೆ,