ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ.
ಜಿಲ್ಲಾಡಳಿತ ಕೊಂಡಸಕೊಪ್ಪ ಸಮೀಪ ನಿರ್ಮಿಸಿದ ಟೆಂಟ್ ನಲ್ಲಿ ಮೂರು ಮತ್ತು ಸುವರ್ಣ ಗಾರ್ಡನ್ ಟೆಂಟ್ ಗಳಲ್ಲಿ ಎಂಟು ಸಂಘಟನೆಗಳಿಂದ ಪ್ರತಿಭಟನೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಬ್ಬಿನ ದರ ನಿಗದಿ, ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಮೂರು ರೈತ ಪರ ಸಂಘಟನೆಗಳಿಂದ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬನಶಂಕರಿ, ಕೆಎಸ್ಆರ್ಟಿಸಿ ನಿಗಮದ ಲೇಬರ್ ಅಸೋಸಿಯೇಷನ್ ಜಂಟಿ ಕ್ರಿಯಾ ಸಮಿತಿ, ಮುಂಡರಗಿ ತಾಲೂಕು ಫೋರಂ, ಅಕ್ಕ ಫೌಂಡೇಶನ್ ಟ್ರಸ್ಟ್, ಹುಬ್ಬಳ್ಳಿ -ಧಾರವಾಡ ವಾರ್ಡ್ ಸಮಿತಿ ಬಳಗ, ಅಖಂಡ ಕರ್ನಾಟಕ ಹೂಗಾರ ಮಹಾಸಭಾ, ಕರ್ನಾಟಕ ರಾಜ್ಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಬಿಬಿಎಂಪಿ ಲೈಬ್ರರಿ ಸೂಪರ್ವೈಸರ್ಸ್ ವತಿಯಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.