
ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ನೆಪದಲ್ಲಿ ಬೆಳಗಾವಿ ಮೇಯರ್ ಹಾಗೂ ಉಪಮೇಯರ್ ಕಚೇರಿಗಳಿಗೆ ಬೀಗ ಹಾಕಲಾಗಿದ್ದು. ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಮಳೆ ಅನಾಹುತ ಸಂಭವಿಸುತ್ತಿವೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕಸ ವಿಲೇವಾರಿಯಾಗುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ಮೇಯರ್, ಉಪಮೇಯರ್ ಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ. ನೀತಿ ಸಂಹಿತೆ ಹೆಸರಲ್ಲಿ ಮೇಯರ್, ಉಪಮೇಯರ್ ಕಚೇರಿಗಳಿಗೆ ಬೀಗ ಹಾಕಿದ್ದಾರೆ. ಜನರು ಸಮಸ್ಯೆಗಳನ್ನು ಹಿಡಿದು ಯಾರ ಬಳಿ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದಾಗಿನಿಂದಲೂ ಕಚೇರಿಗಳಿಗೆ ಬೀಗ ಹಾಕಲಾಗಿದೆ. ನೀತಿ ಸಂಹಿತೆ ಜಾರಿ ಇದೆ ಎಂದು ಸಿಎಂ ಸಿದ್ದರಾಮಯ್ಯನವರ ಕಚೇರಿಗೂ ಬೀಗ ಹಾಕಲಿ ಎಂದು ಕಿಡಿಕಾರಿದ್ದಾರೆ.