ಬೆಳಗಾವಿ: ವಿವಾಹಿತ ಮಹಿಳೆಗೆ ಕೆಲಸದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಿ ಬಲವಂತದಿಂದ ಮತಾಂತರಕ್ಕೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ಸವದತ್ತಿ ಮೂಲದ ಮುನವಳ್ಳಿಯ ಮಹಿಳೆಯೊಬ್ಬರನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬೆಳಗಾವಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್ ಮಾಡಿ ಇಸ್ಲಾಂ ಗೆ ಮತಾಂತರವಾಗುವಂತೆ ಒತ್ತಾಯಿಸಿ ಬುರ್ಖಾ ಧರಣೆಯನ್ನೂ ಮಾಡಿಸಿದ್ದರು.
ದುರುಳರಿಂದ ತಪ್ಪಿಸಿಕೊಂಡು ಬಂದ ಮಹಿಳೆ ಸವದತ್ತಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ಸಂಬಂಧ ಆರೋಪಿ ಆರೀಫ್ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ. ಇನ್ನೂ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುನವಳ್ಳಿ ಪಟ್ಟಣದಲ್ಲಿ ಸಂತ್ರಸ್ತ ಮಹಿಳೆಯ ಪತಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಪತಿ ಹೊರಗೆ ಹೋದಾಗ ಮಹಿಳೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ತಾನು ನೆರಮನೆಯವನು ಎಂದು ಪರಿಚಯಿಸಿಕೊಂಡು ಅಂಗಡಿಗೆ ಬಂದಿದ್ದ ಆರೋಪಿ ಆರೀಫ್ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ.
ಕೆಲ ದಿನಗಳ ಬಳಿಕ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಬೆಳಗಾವಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಆತನ ಜೊತೆ ಇನ್ನೂ ಐವರು ಸೇರಿಕೊಂಡಿದ್ದು, ಮಹಿಳೆಗೆ ಚಿತ್ರಹಿಂಸೆ ನೀಡಿ ಖಾಸಗಿ ಫೊಟೋಗಳನ್ನು ತೆಗೆದುಕೊಂಡು ಮತಾಂತರವಾಗುವಂತೆ ಬಲವತ ಮಾಡಿದ್ದಾರೆ. ಒಂದು ವೇಳೆ ಇಸ್ಲಾಂ ಗೆ ಮತಾಂತರವಾಗದಿದ್ದರೆ ಫೋಟೋಗಳನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಬಲವಂತದಿಂದ ಬುರ್ಖಾ ಧಾರಣೆ ಮಾಡಿಸಿದ್ದಾರೆ. ದುರುಳರಿಂದ ತಪ್ಪಿಸಿಕೊಂಡು ಸವದತ್ತಿಗೆ ವಾಪಾಸ್ ಆದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಪೊಲೀಸರು ಆರೋಪಿ ಆರೀಫ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.