ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಎರಡೂ ಸ್ಥಾನ ಬಿಜೆಪಿ ಪಾಲಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಬಿಜೆಪಿಯಿಂದ ಕನ್ನಡ ಹಾಗೂ ಮರಾಠಿ ಸಮುದಾಯಗಳ ಓಲೈಕೆ ಮಾಡಲಾಗಿದೆ.
ಮೇಯರ್ ಆಗಿ ಪೌರ ಕಾರ್ಮಿಕ ಮಹಿಳೆ, ಕನ್ನಡತಿ ಬಿಜೆಪಿಯ ಸವಿತಾ ಕಾಂಬಳೆ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಮರಾಠಿ ಭಾಷಿಗ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ.
ಬಿಜೆಪಿಯ ಆನಂದ್ ಚೌವ್ಹಾಣ್ ಉಪಮೇಯರ್ ಸ್ಥಾನಕ್ಕೆ 39 ಮತಗಳ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲ್ಕರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಜ್ಯೋತಿ ಕಡೋಲ್ಕರ್ 20 ಮತಗಳನ್ನು ಪಡೆದಿದ್ದರು.
ಮೇಯರ್ ಆಗಿ ಆಯ್ಕೆಯಾಗಿರುವ ಸವಿತಾ ಕಾಂಬಳೆ ಕೆಲ ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಬಳಿಕ ಹೆಲ್ಮೆಟ್ ಕಂಪನಿಯಲ್ಲಿ ದಿನಗೂಲಿ ನೌಕರರಾಗಿದ್ದರು. ನಂತರದಲ್ಲಿ ಅಗರಬತ್ತಿ ತಯಾರಿಕಾ ಘಟಕ ಆರಂಭಿಸಿದ್ದರು. 2021ರಲಿ ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಸವಿತಾ ಕಾಂಬಳೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.