ಬೆಳಗಾವಿ: ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧ ಸಭಾಂಗಣದಲ್ಲಿ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗ ಮಟ್ಟದ ಸಭೆ ನಡೆಸಿದ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೃಷಿಕರಿಗೆ ಯೋಜಿತ ತರಬೇತಿ ನೀಡಿ ಅವರ ಸಾಮರ್ಥ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಯಾದಗಿರಿ, ಗದಗ, ವಿಜಯನಗರ, ಚಾಮರಾಜನಗರ, ಕೋಲಾರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆಗಿಂತಲೂ ಹೆಚ್ಚು ಸರಬರಾಜು ಮಾಡಲಾಗಿದೆ. ಗೊಂದಲವಿಲ್ಲದಂತೆ ಬೀಜ, ರಸಗೊಬ್ಬರ ವಿತರಿಸಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳ ನೆರವನ್ನು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.