ಆಧಾರ್ ಕಾರ್ಡ್ ಲಿಂಕ್ ಸೇರಿ ಕೇಂದ್ರ ಸರಕಾರ ಹಲವು ಪ್ರಕ್ರಿಯೆ, ದಾಖಲೆ ಸಲ್ಲಿಕೆ, ತೆರಿಗೆ ರಿಟರ್ನ್ಸ್‌ಗಳಿಗೆ 2022, ಮಾರ್ಚ್ 31ರ ಗಡುವು ನೀಡಿದೆ. ಅದರಂತೆ ತಿಂಗಳೊಳಗೆ ಈ ಐದು ಪ್ರಕ್ರಿಯೆ ಮುಗಿಸಿಲ್ಲ ಎಂದರೆ ಭಾರಿ ದಂಡ ತೆರಬೇಕಾಗುತ್ತದೆ.
ಮೊದಲನೆಯದಾಗಿ, ಆಧಾರ್-ಪ್ಯಾನ್‌ಕಾರ್ಡ್ ಲಿಂಕಿಂಗ್ ಅನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರವು ಹಲವು ಬಾರಿ ಗಡುವು ಮುಂದೂಡಿದೆ. ಆದರೆ, ಈ ಬಾರಿ ಮಾರ್ಚ್ 31ರೊಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ವಿಳಂಬವಾದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
’ನೋ ಯುವರ್ ಕಸ್ಟಮರ್ (ಕೆವೈಸಿ)’ ಅಪ್‌ಡೇಟ್ ಮಾಡುವುದು ಎರಡನೇ ಪ್ರಮುಖ ಜವಾಬ್ದಾರಿಯಾಗಿದೆ. 2021ರ ಡಿ.31 ಇದ್ದ ಗಡುವನ್ನು ವಿಸ್ತರಣೆ ಮಾಡಿದ್ದು, ಈಗ ಒಂದು ತಿಂಗಳಲ್ಲಿ ಕೆವೈಸಿ ಅಪ್‌ಡೇಟ್ ಮಾಡಬೇಕಿದೆ. ಪಾಸ್‌ಪೋರ್ಟ್ ಹಾಗೂ ವಿಳಾಸದ ದಾಖಲೆ ಸಲ್ಲಿಸಿ ಕೆವೈಸಿ ಅಪ್‌ಡೇಟ್ ಮಾಡಬಹುದು.
2021-2022ನೇ ಸಾಲಿನಲ್ಲಿ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇದೇ ತಿಂಗಳ ಗಡುವು ನೀಡಲಾಗಿದೆ. ವಿಳಂಬವಾದ ರಿಟರ್ನ್ಸ್‌ಅನ್ನು ಮಾರ್ಚ್ 31ರೊಳಗೆ ಸಲ್ಲಿಸುವ ಮೂಲಕ 10 ಸಾವಿರ ರೂ. ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ಕೇಂದ್ರ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೊಳಿಸಿದ್ದು, ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಮೂರನೇ ಹಂತದಲ್ಲಿ ಅರ್ಜಿ ಸಲ್ಲಿಸಲು ಸಹ ಇದೇ ತಿಂಗಳು ಗಡುವಾಗಿದೆ. ಹಾಗೆಯೇ, ಮುಂಗಡ ತೆರಿಗೆ ಪಾವತಿಸಲು ಸಹ ಮಾರ್ಚ್ 31 ಕೊನೆ ದಿನವಾಗಿದೆ. ಕೂಡಲೇ ಈ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸಿದರೆ ದಂಡದಿಂದ ಮುಕ್ತವಾಗುವ ಜತೆಗೆ ಸರಕಾರದ ಸೇವೆಗಳನ್ನು ಪಡೆಯಬಹುದಾಗಿದೆ.