ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆಯಲ್ಲಿಯೇ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳಿಗೆ ಚಪ್ಪಲಿ ಹಾರಹಾಕಿ ಗ್ರಾಮಸ್ಥರು ನಡು ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿಜಿ ನಗರದ ಜನರು ಮಹಿಳೆಯೊಬ್ಬರಿಗೆ ಚಪ್ಪಲಿ ಹಾರ ಹಾಕಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿ, ಮಹಿಳೆ ವಿರುದ್ಧ ಘೋಷಣೆ ಕೂಗಿದ್ದಾರೆ.
ಶ್ರೀದೇವಿ ಎಂಬ ಮಹಿಳೆಯನ್ನು ಘಟಪ್ರಭಾ ಮೃತ್ಯುಂಜಯ ಸರ್ಕಲ್ ನಲ್ಲಿ ಈ ರೀತಿ ಮೆರವಣಿಗೆ ಮಾಡಿದ್ದಲ್ಲದೇ ಮಹಿಳೆಯನ್ನು ಥಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಮಹಿಳೆ ಶ್ರೀದೇವಿ ವಿರುದ್ಧ ಗಂಭೀರ ಆರೋಪವಿದೆ. ಆಕೆ ಯುವಕರನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎಂದು ಕೆಲ ಮಹಿಳೆಯರು, ಪಿಜಿ ನಗರವಾಸಿಗಳು ಆಕೆಯ ಮನೆಗೆ ಹೋಗಿ ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆಯರನ್ನು ಶ್ರೀದೇವಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಳಂತೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆಕೆಯನ್ನು ಮನೆಯಿಂದ ಎಳೆದು ತಂದು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ.
ಬಳಿಕ ಘಟಪ್ರಭಾ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀದೇವಿಯನ್ನು ವಶಕ್ಕೆ ಪಡೆದಿರುವ ಪೊಲಿಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮಹಿಳೆಯನ್ನು ಅಮಾನವೀಯವಾಗಿ ನಡೆಸಿಕೊಂಡವರ ವಿರುದ್ಧವೂ ದೂರು ದಾಖಲಿಸಿದ್ದಾರೆ.