ಬೆಳಗಾವಿ: ಬೆಳಗಾವಿಯ ಸುವರ್ಣವಿಧಾನಸೌಧದ ಬಳಿ ಅನ್ನದಾತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಕಂಗೆಟ್ಟಿದ್ದು, ಮುಂಗಾರು, ಹಿಂಗಾರು ಬೆಳೆ ಸಂಪೂರ್ಣ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಬೆಳಿಗ್ಗೆಯಿಂದ ಸುವರ್ಣಸೌಧದ ಬಳಿ ಟೆಂಟ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸಂಜೆಯಾದರೂ ಯಾವೊಬ್ಬ ಸಚಿವರು, ಶಾಸಕರು ರೈತರ ಸಂಕಷ್ಟವನ್ನು ಆಲಿಸಲು ಬಾರದಿರುವುದನ್ನು ಕಂಡು ರೈತರು ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಟೆಂಟ್ ನಿಂದ ಹೊರಗೋಡಿದ ರೈತರು, ಸುವರ್ಣಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿ 4ನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ರೈತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಸಚಿವ ಶಿವಾನಂದ ಪಾಟೀಲ್ ಸ್ಥಳಕ್ಕಾಗಮಿಸಿದ್ದಾರೆ. ಸಚಿವರು ಬರುತ್ತಿದ್ದಂತೆ ಮತ್ತೆ ಟೆಂಟ್ ಗೆ ವಾಪಾಸ್ ಆದ ರೈತರು, ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು, ಎಕರೆಗೆ 36 ಸಾವಿರ ಬೆಳೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.