ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್ ಹೊರಟ್ಟಿ, ಬೆಳಗಾವಿ ಅಧಿವೇಶನ ಅಂದರೆ ಪ್ರತಿಭಟನೆ ಎನ್ನುವಂತಾಗಿದೆ. ಈ ಬಾರಿ ಹಾಗಾಗಬಾರದು. 2022ರಲ್ಲಿ ಅಧಿವೇಶನದ ಸಂದರ್ಭದಲ್ಲಿ 102ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಗಳಲ್ಲಿ 80 ಸಾವಿರ ಜನರು ಪಾಲ್ಗೊಂಡಿದ್ದರು. ಪ್ರತಿಭಟನೆ ಮಾಡಬೇಡಿ ಎಂದು ಹೇಳಲ್ಲ. ಆದರೆ ಪ್ರತಿಭಟನೆಗೆ ಸರ್ಕಾರವೇ ಸಹಕರಿಸುವ ರೀತಿ ಟೆಂಟ್ ಹಾಕಿ ಪ್ರತಿಭಟನೆಗಳಿಗೆ ವ್ಯವಸ್ಥೆ ಮಾಡುವುದು ಸರಿಯಲ್ಲ ಎಂದರು.
ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ಬಾರಿ ಯಾವುದೇ ಸ್ಟ್ರೈಕ್ ನಡೆಯದಂತೆ ನೋಡಿಕೊಳ್ಳಬೇಕು. ರೈತರು, ರೈತ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಆಲಿಸುವಂತೆ ಸಚಿವರುಗಳಿಗೆ ಸೂಚಿಸಿದ್ದೇನೆ. ಈಗಾಗಲೇ ನಾಲ್ವರು ಸಚಿವರಿಗೆ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಗಳು ಆಗಬಾರದು ಎಂದು ತಿಳಿಸಿದ್ದೇನೆ. ಜನಪ್ರತಿನಿಧಿಗಳು ಅಧಿವೇಶನದಲ್ಲಿ ಸರಿಯಾದ ರೀತಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಭಟನೆಗಳಿಂದ ಕೇವಲ ಶೇ.10ರಷ್ಟು ಸಮಸ್ಯೆ ಬಗೆಹರಿದಿದೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರು ಪ್ರಯತ್ನಿಸಬೇಕು. ಪ್ರತಿಭಟನೆ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಬಾರದು ಎಂದು ತಿಳಿಸಿದರು.