ಬೆಳಗಾವಿ: ಭೂಮಿ ಉಳಿವಿಗಾಗಿ ಒತ್ತಾಯಿಸಿ ಕಿತ್ತೂರಿನ ಕುಲವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 9 ಗ್ರಾಮಗಳ ರೈತರು ಹಾಗೂ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
9 ಗ್ರಾಮಗಳ ರೈತರು ಕುಟುಂಬ ಹಾಗೂ ದನಕರುಗಳ ಸಮೇತವಾಗಿ ಆಗಮಿಸಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ರೈತರ ಪ್ರತಿಭಟನೆಗೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ರೈತರು ಹಾಗೂ ಮಕ್ಕಳು ಊಳುವವನೇ ಭೂಮಿಯ ಒಡೆಯ ಯೋಜನೆ ಅಡಿ ಭೂಮಿ ಪಡೆದಿದ್ದ ರೈತರಿಗೆ ಜಮೀನು ಹಕ್ಕು ಪತ್ರ ನೀಡುವಂತೆ ಹಾಗೂ ಮರು ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಂದಾಯ ಸಚಿವರು ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಈ ವೇಳೆ ರೈತರು ಹಾಗೂ ವಿದ್ಯಾರ್ಥಿಗಳ ಮನವೊಲಿಕೆಗೆ ಪೊಲೀಸರು ಯತ್ನಿಸಿದರೂ ಸಾಧ್ಯವಾಗಿಲ್ಲ. ಪೊಲೀಸರು ಹಾಗೂ ರೈತರು, ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನೆ ತೀವ್ರಸ್ವರೂಪ ಪಡೆದಿದೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಲಾಠಿ ಏಟಿಗೆ ಹಲವು ವಿದ್ಯಾರ್ಥಿಗಳು, ರೈತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.