ಬೆಳಗಾವಿ: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲದಿಂದಾಗಿ ರೈತರು, ಜನರು, ದನ-ಕರುಗಳು ಸಂಕಷ್ಟಕ್ಕೀಡಾಗಿವೆ. ಮೋಡ ಬಿತ್ತನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಗಳು ಕೇಳಿಬಂದಿವೆ. ಈ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಬರದಿಂದಾಗಿ ರೈತರು ಬಿತ್ತಿದ ಬೆಳೆಗಳು ಒಣಗಿದ್ದು, ನೀರಿಲ್ಲದೇ ಹೊಲ-ಗದ್ದೆಗಳು ಬಿರುಕು ಬಿಡುತ್ತಿವೆ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮೋಡ ಬಿತ್ತನೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರದಿಂದ ಅನುಮತಿ ಪಡೆಯಲು 20 ದಿನ ಬೇಕಾಯಿತು. ಸೆ. 28ರಂದು ಅನುಮತಿ ಸಿಕ್ಕಿದೆ. ಬೆಳಗಾವಿಯಾದ್ಯಂತ ಮೂರು ದಿನ ಮೋಡ ಬಿತ್ತನೆಯ ಗುರಿ ಇಟ್ಟುಕೊಂಡಿದ್ದು, ಮೊದಲ ದಿನ ಗೋಕಾಕ ಮತ್ತು ಖಾನಾಪುರದಲ್ಲಿ ಬಿತ್ತನೆ ಕಾರ್ಯಾಚರಣೆ ನಡೆದಿದೆ. ಪ್ರತಿ ದಿನ ಮೂರು ಗಂಟೆ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದರು.
ಈ ಹಿಂದೆ ಕೆಲವೊಮ್ಮೆ ಒಂದು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಿದಾಗ ಮತ್ತೊಂದು ಜಿಲ್ಲೆಯಲ್ಲಿ ಮಳೆಯಾದ ಉದಾಹರಣೆಗಳು ಇವೆ. ಎಲ್ಲಿ ಮಳೆಯಾದರು ಅಲ್ಲಿಯ ರೈತರಿಗೆ ಅನುಕೂಲವಾದರೆ ಸಾಕು. ರೈತರ ಅನುಕೂಲಕ್ಕಾಗಿಯೇ ಮೋಡ ಬಿತ್ತನೆ ಮಾಡಲಾಗುತ್ತಿದೆ ಎಂದು ಹೇಳಿದರು.