
ಬೆಳಗಾವಿ: ಕಳ್ಳರೆಂದು ತಪ್ಪಾಗಿ ತಿಳಿದು ಮೂವರು ಯುವಕರನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಬಂದ ನಾಲ್ವರು ಅಪರಿಚಿತ ಯುವಕರನ್ನು ಕಂಡ ಗ್ರಾಮಸ್ಥರು, ಯಾರೆಂದು ವಿಚಾರಿಸಿದ್ದಾರೆ. ಈ ವೇಳೆ ಓರ್ವ ಯುವಕ ಓಡಿ ಹೋಗಿದ್ದಾನೆ. ಇದರಿಂದ ಗ್ರಾಮಸ್ಥರು ಮೂವರನ್ನು ಹಿಡಿದು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಗ್ರಾಮಸ್ಥರು ಮನಸೋ ಇಚ್ಛೆ ಮೂವರು ಯುವಕರನ್ನು ಥಳಿಸುತ್ತಿರುವ ವಿಷಯ ಚಿಕ್ಕೋಡಿ ಪೊಲಿಸರಿಗೆ ಗೊತ್ತಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ರಕ್ಷಣೆ ಮಾಡಿದ್ದಾರೆ.
ಚಿಕ್ಕೋಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವುದರಿಂದ ನಾಲ್ವರು ಯುವಕರು ಕಳ್ಳರಿರಬಹುದು ಎಂದು ಭಾವಿಸಿ ಥಳಿಸಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ. ಯುವಕರನ್ನು ಥಳಿಸಿದ ಹತ್ತು ಜನ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಮೂಲದವರೆಂದು ತಿಳಿದುಬಂದಿದೆ.