ಬೆಳಗಾವಿ: ಡಿಸೆಂಬರ್ 4ರಿಂದ 15ವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬರದಿಂದ ಸಿದ್ಧತೆ ಕಾರ್ಯಗಳು ನಡೆದಿವೆ. ಅಧಿವೇಶನ ಹಿನ್ನೆಲೆಯಲ್ಲಿ ರಾಜಕಾರಣಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.
ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಭದ್ರತೆಗಾಗಿ 5,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಷ್ಟೊಂದು ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕಾಗಿ ಜರ್ಮನ್ ಟೆಂಟ್ ನೊಂದಿಗೆ ಬೃಹತ್ ಟೌನ್ ಶಿಪ್ ನಿರ್ಮಾಣ ಮಾಡಲಾಗಿದೆ.
ಸುವರ್ಣವಿಧನಸೌಧದ ಅಲಾರವಾಡ ಬಳಿ ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಟೌನ್ ಶಿಪ್ ನಿರ್ಮಿಸಲಾಗಿದ್ದು, ಮೈಸೂರಿನ ಕೆ.ಎಂ.ಶರೀಫ್ ಎಂಬುವವರು ಜರ್ಮನ್ ಟೆಂಟ್ ಟೌನ್ ಶಿಪ್ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ. ಕಳೆದ 13 ದಿನಗಳಿಂದ 100 ಕಾರ್ಮಿಕರು ಟೆಂಟ್ ನಿರ್ಮಾಣದಲ್ಲಿ ತೊಡಗಿದ್ದು, ಬಹುತೇಕ ಪೂರ್ಣಗೊಂಡಿದೆ.
ನಾಲ್ಕು ಬೃಹತ್ ಜರ್ಮನ್ ಟೆಂಟ್ ಹಾಕಲಾಗಿದ್ದು, ಒಂದು ಟೆಂಟ್ 100 ಅಡಿ ಅಗಲ, 200 ಅಡಿ ಉದ್ದ ಇರಲಿದೆ. ಒಂದು ಟೆಂಟ್ ನಲ್ಲಿ 500 ಜನ ಸಿಬ್ಬಂದಿಗೆ ಮಲಗಲು ವ್ಯವಸ್ಥೆ ಮಾಡಲಾಗಿದೆ. ವಾಟರ್ ಫ್ರೂಫ್ ಟೆಂಟ್ ಇದಾಗಿದ್ದು ಒಟ್ಟು 2000 ಪೊಲೀಸ್ ಸಿಬ್ಬಂದಿಗಳು ಇಲ್ಲಿ ವಾಸ್ತವ್ಯ ಮಾಡಬಹುದಾಗಿದೆ.