
ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಎಸ್ ಡಿಎ ರುದ್ರಣ್ಣ ತನ್ನ ಸಾವಿಗೆ ತಹಶೀಲ್ದಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಕಾರಣ ಎಂದು ವಾಟ್ಸಪ್ ಮೆಸೇಜ್ ರವಾನಿಸಿರುವುದು ಪತ್ತೆಯಾಗಿದೆ.
35 ವರ್ಷದ ರುದ್ರಣ್ಣ ಯಡಣ್ಣವರ್ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಹಲವು ವರ್ಷಗಳಿಂದ ಎಸ್ ಡಿಎ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಅವರಿಗೆ ಸವದತ್ತಿ ತಹಶೀಲ್ದಾರ್ ಕಚೇರಿಗೆ ವರ್ಗಾವಣೆಯಾಗಿತ್ತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರುದ್ರಣ್ಣ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇಂದು ಬೆಳಗಾಗುವಷ್ಟರಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಬಸವರಾಜ್ ನಾಗರಾಳ ಅವರ ಕೊಠಡಿಯಲ್ಲಿಯೇ ರುದ್ರಣ್ಣ ನೇಣಿಗೆ ಶರಣಾಗಿದ್ದಾರೆ.
ಇದೀಗ ರುದ್ರಣ್ಣ ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್ ಗೆ ಕಳುಹಿಸಿರುವ ಸಂದೇಶ ಪತ್ತೆಯಾಗಿದೆ. ಅದರಲ್ಲಿ ತನ್ನ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ಕೆಲ ಸಮಯದಲ್ಲೇ ‘ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಹಾಗೂ ಸೋಮು ಕಾರಣ. ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡ’ ಎಂದು ಮೆಸೇಜ್ ಮಾಡಿದ್ದಾರೆ. ಕೆಲ ಸಮಯದಲ್ಲೇ ಮತ್ತೊಂದು ಮೆಸೇಜ್ ನಲ್ಲಿ ಅಶೋಕ್ ಕಬ್ಬಲಿಗೇರ್ ಕೂಡ ಕಾರಾಣ ಎಂದು ಮೆಸೇಜ್ ಮಾಡಿದ್ದಾರೆ.
ಸೋಮು ಎಂದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ಎಂದು ತಿಳಿದುಬಂದಿದೆ. ಇನ್ನು ಮೃತ ರುದ್ರಣ್ಣ ತಾಯಿ ಹೇಳುವ ಪ್ರಕಾರ ರಾತ್ರಿ ಊಟಕ್ಕೆ ಕುಳಿತಿದ್ದ ವೇಳೆ ಯಾರದೋ ಫೋನ್ ಬಂದಿತ್ತು. ಊಟ ಅರ್ಧಕ್ಕೆ ಬಿಟ್ಟು ರುದ್ರಣ್ಣ ಎದ್ದು ಹೋಗಿದ್ದ. ಹೀಗೆ ಹೋದವನು ವಾಪಾಸ್ ಬಂದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆ ಎಸ್ ಡಿಎ ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.