ಬೆಳಗಾವಿ: ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ತಡರಾತ್ರಿ ಕಿಡಿಗೇಡಿಗಳು ಪುಂಡಾಟ ಮೆರೆದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಿಡುವುದಿಲ್ಲ. ಇದು ಬೆರಳೆಣಿಕೆಯಷ್ಟು ಜನರು ಮಾಡುತ್ತಿರುವ ಕೃತ್ಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಪುಂಡಾಟಿಕೆ ಹತ್ತಿಕ್ಕುವ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ತಪ್ಪಿತಸ್ಥರಿಗೆ ಭಯ ಹುಟ್ಟಿಸಲಾಗುವುದು ಎಂದು ಗುಡುಗಿದ್ದಾರೆ.
ಬೆಳಗಾವಿಯ ಶಿವಾಜಿ ಗಾರ್ಡನ್ ನಲ್ಲಿರುವ ಶಿವಾಜಿ ಪುತ್ಥಳಿ ಬಳಿ ಯಾರೂ ಸುಳಿಯದಂತೆ ಡಿಸಿಪಿ ಸ್ನೇಹಾ ಸೂಚಿಸಿದ್ದಾರೆ. 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಜನ ಸೇರುವಂತಿಲ್ಲ ಎಂದು ತಿಳಿಸಿದ್ದಾರೆ.
ಶಿವಾಜಿ ಪುತ್ಥಳಿಗೆ ಅವಮಾನ ಮಾಡಿದವರಿಗೆ ಶಿಕ್ಷೆಯಾಗಬೇಕು. ಎರಡು ದಿನದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದಿದ್ದರೆ ಸುಮ್ಮನಿರುವುದಿಲ್ಲ. ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿರುವುದನ್ನು ನಾವು ಸಹಿಸುವುದಿಲ್ಲ ಎಂದು ಶಿವ ಪ್ರತಿಷ್ಠಾಪನಾ ಸೇನೆ ಕಾರ್ಯಕರ್ತ ಹೀರಾಮನಿ ಮುಚ್ಚಂಡಿಕರ ಹೇಳಿದ್ದಾರೆ. ನಾವು ಯಾವ ಪ್ರತಿಭಟನಾ ಮೆರವಣಿಗೆ ಮಾಡುವುದಿಲ್ಲ. ಮನವಿ ಕೊಡುವುದಿಲ್ಲ. ನಾವೇನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಆನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ದಕ್ಕೆ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಪ್ರತಿಭಟನೆ ನಡೆಸಲಾಗಿದೆ. ಬೆಳಗಾವಿಯ ಟಿಳಕವಾಡಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಎಂಇಎಸ್ ಮುಖಂಡ ಶುಭಂ ಶಳಕೆ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಹಿಂದೂಸ್ಥಾನ್ ಶ್ರೀರಾಮಸೇನೆಯ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ್ ಸೇರಿ ಹಲವರನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ ನಿನ್ನೆ ರಾತ್ರಿ ಅಟ್ಟಹಾಸಗೈದ ಕಿಡಿಗೇಡಿಗಳು ಪುಂಡಾಟಿಕೆ ಮೆರೆದಿದ್ದರು. ಬೆಳಗಾವಿ ಪೋಲಿಸ್ ಆಯುಕ್ತ ಕೆ. ತ್ಯಾಗರಾಜನ್ 27 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿಯ ಮೂರು ಪೊಲೀಸ್ ಠಾಣೆಗಳಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ, ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರು. ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕೇಸು ದಾಖಲಿಸಲಾಗಿದೆ. 100ಕ್ಕೂ ಹೆಚ್ಚು ಜನರ ವಿರುದ್ಧ ಮೂರು ಠಾಣೆಗಳಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.