ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆದಿದ್ದು, ಪ್ರತಿಭಟನಾಕಾರರು ಮತ್ತು ಪೋಲಿಸ್ ಹಾಗೂ ಸರ್ಕಾರಿ ವಾಹನಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದ ಪ್ರಕರಣ ವಿರೋಧಿಸಿ ಬೆಳಗಾವಿಯಲ್ಲಿ ತಡರಾತ್ರಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ನಿಂದಲೂ ಪ್ರತಿಭಟನೆ ನಡೆಸಲಾಗಿದ್ದು, ಧರಣಿ ನಿರತರನ್ನು ಪೋಲೀಸರು ವಾಪಸ್ ಕಳುಹಿಸಿದ್ದಾರೆ.
ವಾಪಸ್ ಹೋದವರಂತೆ ಹೋಗಿ ಕೆಲವರು ಪುಂಡಾಟ ನಡೆಸಿದ್ದಾರೆ. ರಸ್ತೆ ಅಕ್ಕಪಕ್ಕದಲ್ಲಿದ್ದ ಕಾರ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಾಮಲಿಂಗಾಖಿಂಡಾದಲ್ಲಿ ಕಲ್ಲುತೂರಾಟ ನಡೆಸಲಾಗಿದ್ದು, 20 ಕ್ಕೂ ಹೆಚ್ಚು ಕಾರ್ ಗಳು ಜಖಂಗೊಂಡಿವೆ. 6 ಸರ್ಕಾರಿ ಕಾರ್ ಗಳು ಹಾಗೂ 6 ಪೊಲೀಸ್ ಇಲಾಖೆ ವಾಹನಗಳು ಮತ್ತು ಸಿನಿಮಾ ನೋಡಲು ಬಂದವರ ಎರಡು ಕಾರುಗಳಿಗೆ ಹಾನಿಯಾಗಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರ್ ಗಳ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದು, ಇದೇ ಹೊತ್ತಲ್ಲಿ ಪುಂಡಾಟಿಕೆ ನಡೆಸಲಾಗಿದೆ. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.