ಈ ಬಾರಿಯ 10ನೇ ತರಗತಿ ಫಲಿತಾಂಶ ಸೋಮವಾರದಂದು ಪ್ರಕಟವಾಗಿದ್ದು, ಒಟ್ಟಾರೆ ಶೇ.83.83 ರಷ್ಟು ಫಲಿತಾಂಶ ಬಂದಿದೆ. ಟಾಪ್ 3 ಜಿಲ್ಲೆಗಳಲ್ಲಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಮಂಡ್ಯ ಹಾಗೂ ಹಾಸನ ಜಿಲ್ಲೆ ಇದೆ.
ಹಲವು ವಿದ್ಯಾರ್ಥಿಗಳು ಅಂಕ ಗಳಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಈ ಪೈಕಿ ಬೆಳಗಾವಿ ಜಿಲ್ಲೆ ಸವದತ್ತಿಯ ಅನುಪಮಾ ಕೂಡ ಒಬ್ಬರು. ಕಿತ್ತು ತಿನ್ನುವ ಬಡತನ ಹಾಗೂ ತಂದೆ ಕಳೆದುಕೊಂಡ ನೋವಿನಲ್ಲೂ ಅನುಪಮಾ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಸವದತ್ತಿಯ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನುಪಮಾ ತಂದೆ ಕಳೆದ ವರ್ಷ ನಿಧನರಾಗಿದ್ದು, ತಾಯಿ ರಾಜಶ್ರೀ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಇದರ ಮಧ್ಯೆಯೂ ಪುತ್ರಿಯ ಶಿಕ್ಷಣಕ್ಕೆ ಒತ್ತು ನೀಡಿದ್ದು, ತಾಯಿಯ ನಿರೀಕ್ಷೆಯನ್ನು ಅನುಪಮಾ ಹುಸಿ ಮಾಡಿಲ್ಲ.
ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿಯಾಗಿದ್ದ ಅನುಪಮಾ ಮಾಡಿರುವ ಈ ಸಾಧನೆಗೆ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದೆ. ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಅನುಪಮಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.