ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಿ ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಬೆಳಗಾವಿ ನಗರ ಸಜ್ಜಾಗಿದೆ. ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿರುವ ಪ್ರಧಾನಿಯವರು ಇಂದು 10.5 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಬೆಳಗಾವಿಯ ರೈಲು ನಿಲ್ದಾಣ ಜೋಡಿ ರೈಲು ಮಾರ್ಗ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸುವರು.
ಪ್ರಧಾನಿಯವರ ರೋಡ್ ಶೋ ಸಂದರ್ಭದಲ್ಲಿ ಜನಸಾಮಾನ್ಯರು ಮತ್ತು ಅಭಿಮಾನಿಗಳು ದೇಶದ 29 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರಧಾನಿಯವರಿಗೆ ಶುಭ ಕೋರಲಿದ್ದಾರೆ. ಕೇಸರಿ ಪೇಟ ತೊಟ್ಟು 10,000 ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಲಿದ್ದಾರೆ.
ಇನ್ನು ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಐದು ಜನ ಕಾಯಕಯೋಗಿಗಳು ವಿಶೇಷ ಸ್ವಾಗತ ನೀಡಲಿದ್ದಾರೆ. ಆಟೋ ಚಾಲಕ ಮಯೂರ ಚೌಹಾಣ್, ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ನೇಕಾರ ಕಲ್ಲಪ್ಪ ಟೋಪಗಿ, ರೈತ ಮಹಿಳೆ ಶೀಲಾ, ಕಟ್ಟಡ ಕಾರ್ಮಿಕ ಮಂಗೇಶ ಅವರು ಪ್ರಧಾನಿಯವರಿಗೆ ಸ್ವಾಗತ ನೀಡುವರು.