ಬೆಳಗಾವಿ: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಯುವಕ ಅದೇ ಗ್ರಾಮದ 21 ವರ್ಷದ ಯುವತಿಯ ಹಿಂದೆಬಿದ್ದು ತನ್ನನ್ನು ಮದುವೆಯಾಗುವಂತೆ ಕಳೆದ ಮೂರು ವರ್ಷಗಳಿಂದ ಪೀಡಿಸುತ್ತಿದ್ದಾನೆ. ಯುವತಿ ನಿರಾಕರಿಸಿದ್ದಕ್ಕೆ ಕೆಲ ದಿನಗಳ ಹಿಂದೆ ಆಕೆಯ ಮನೆಯ ಬಾಗಿಲಿಗೆ ಬೆಂಕಿ ಹಚ್ಚಿ ಹೋಗಿದ್ದಾನೆ. ಈಗ ಮೂರು ದಿನಗಳ ಹಿಂದೆ ಯುವತಿಯ ಕುಟುಂಬದವರು ಮನೆಯಲ್ಲಿ ಇಲ್ಲದ ವೇಳೆ ಬಂದು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಡಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ಪುಂಡಾಟ ಮೆರೆದಿದ್ದಾನೆ ಎನ್ನಲಾಗಿದೆ.
ಕಳೆದ ಮೂರು ವರ್ಷಗಳಿಂದ ಯುವತಿಗೆ ತಿಪ್ಪಣ್ಣ ಡೋಕರೆ ಪಿಡಿಸುತ್ತಿದ್ದಾನಂತೆ. ಆಕೆ ಕಾಲೇಜಿಗೆ ಹೋಗುವಾಗಲೂ ಫಾಲೋ ಮಾಡಿಕೊಂಡು ಬಂದು ಕಿರುಕುಳ ನೀಡುತ್ತಿದ್ದನಂತೆ. ಆತನ ಕಾಟಕ್ಕೆ ಬೇಸತ್ತ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿ, ಮನೆಯಲ್ಲಿದ್ದಾಳೆ. ಯುವತಿಯ ಮನೆಯ ಬಳಿಯೇ ಇರುವ ಜಮೀನಿಗೆ ಬರುವ ನೆಪದಲ್ಲಿ ಆಗಾಗ ಮನೆ ಬಳಿ ಬಂದು ಯುವತಿಗೆ ತನ್ನನ್ನು ಮದುವೆಯಾಗು ಇಲ್ಲವಾದಲ್ಲಿ ಹುಬ್ಬಳ್ಳಿ ಯುವತಿಯರಿಗಾದ ಗತಿಯೇ ನಿನಗೂ ಆಗಲಿದೆ ಎಂದು ಬೆದರಿಕೆ ಹಾಕುತ್ತಿದ್ದಾನಂತೆ. ಯುವಕನ ಹುಚ್ಚಾಟಕ್ಕೆ ಕಂಗಾಲಾಗಿರುವ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಯುವಕನ ಹುಚ್ಚಾಟಕ್ಕೆ ಯಾವ ರೀತಿ ಬ್ರೇಕ್ ಹಾಕುತ್ತಾರೆ ಕಾದುನೋಡಬೇಕಿದೆ.