ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ವಿಧಾನಮಂಡಲ ಚಳಿಗಾಲದ ಅದಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಮುಂದಾಗಿದ್ದ ನಾಡದ್ರೋಹಿ ಎಂಇಎಸ್ ಪುಂಡರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಎಂಇಎಸ್ ಮಹಾಮೇಳಾವ್ ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ. ಆದಾಗ್ಯೂ ಇಂದು ಎಂಇಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಧರ್ಮವೀರ ಸಂಭಾಜಿ ವೃತ್ತದತ್ತ ಆಗಮಿಸುತ್ತಿದ್ದರು. ನಿಷೇಧದ ನಡುವೆಯೂ ಮಹಾಮೇಳಾವ್ ಗೆ ಎಂಇಎಸ್ ಮುಂದಾಗಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬೆಳಗಾವಿಯಲ್ಲಿ ಬಿಗಿ ಭದ್ರತೆ ಕೈಗೊಂಡಿತ್ತು.
ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆಗೊಂಡಿದ್ದರು. ಅಲ್ಲದೇ ನಗರದ ಮೂರು ಮೈದಾನ, ಒಂದು ವೃತ್ತದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೀಗಿ ಭದ್ರತೆ ಕೈಗೊಳ್ಳಲಾಗಿತ್ತು. ಆದಾಗ್ಯೂ ಈ ವೇಳೆ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸಲು ಮುಂದಾಗಿ, ಧರ್ಮವೀರ್ ಸಂಭಾಜಿ ವೃತ್ತದತ್ತ ಧಾವಿಸಿದ್ದಾರೆ.
ಸಂಭಾಜಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ನಾಯಕರಾದ ಮನೋಹರ ಕಿಣೇಕರ, ಆರ್ ಎಂ. ಪಾಟೀಲ್, ಪ್ರಕಾಶ ಶಿರೋಲಕರ್, ಪ್ರಕಾಶ ಮರ್ಕಾಳೆ ಸೇರಿ 20ಕ್ಕೂ ಹೆಚ್ಚು ನಾಯಕರನ್ನು ವಶಕ್ಕೆ ಪಡೆಯಲಾಗಿದೆ.